ಸೋಮವಾರ, ಡಿಸೆಂಬರ್ 8, 2014

ಇದು ಪ್ರೇಮವಲ್ಲದೆ ಮತ್ತೇನು ?


ಬೆಳದಿಂಗಳ ರಾತ್ರಿಯಲಿ ನಿನ್ನ ಜೊತೆಯಲ್ಲಿನ ಆ ದಿನ ನೂರು ಮಾತುಗಳಿಗೆ ಸ್ಫೂರ್ತಿಯಾದರೂ ನಡುವೆ ಬೇಕಾದ ಒಂದು ಮಾತಾಡಲು ನನ್ನಿಂದಾಗಲಿಲ್ಲ. ನೀನು ನಕ್ಕಾಗಲೆಲ್ಲ ಗಾಳಿ ನಿನ್ನ ಚುಂಬನಳನ್ನೊತ್ತು ನನ್ನ ತಲುಪಿದಂತಾಗಿ ಕ್ಷಣಕಾಲ ಎಲ್ಲೋ
ಕಳೆದು ಹೋಗಿ, ಮತ್ತೆ ಆಸೆಗಳ ಒಳ ಸದ್ದಿಗೆ ಎಚ್ಚರಗೊಂಡು ಪ್ರಶ್ನೆ ಉತ್ತರಗಳ ಲೆಕ್ಕಾಚಾರಗಳಲ್ಲೇ ಗಿರಕಿ ಹೊಡೆಯುತ್ತಿದ್ದ, ನಿನಗಾಗಿ ಹಾತೊರೆದು ಹಂಬಲಿಸಿದ ಮನವ ನೀನು ನನ್ನ ಕಣ್ಣುಗಳಿಂದೋದಿ ಸಂತೈಸಿ ಇತ್ತ ಹಸ್ತಲಾಗವದ ಅರ್ಥ ಪ್ರೇಮವಲ್ಲದೆ ಮತ್ತೇನು?

 

ಇದು ಪ್ರೇಮವಲ್ಲದೆ ಮತ್ತೇನು ?
---------------------------------

ಅದೇನೋ....ಅದೇಕೋ....? ನಿನ್ನೊಡನಿರುವಾಗ
ಇಲ್ಲದ ವಿಷಯಗಳಿಗೆ ಜೀವ ಬಂದಾಗ
ಪ್ರತಿ ಕ್ಷಣಗಳು ಮಾತಾಗಿ ಗಮನಗಳೆಲ್ಲ
ನಿನ್ನ ನಗಿಸುವ ಖುಷಿಯಾಗಿಸುವ ಸಂಗತಿಗಳ ಹುಡುಕುತ್ತ
ಪಯಣಿಸುವವು ಮಧುರ ಕಲ್ಪನೆಗಳ ಗುರಿಗಳನ್ನೊತ್ತು

ನಿನ್ನ ನಗುವೇ ಮುತ್ತಿಟ್ಟು ಕಚಗುಳಿ ಇಡುವಾಗ
ಮಾತುಗಳು ಕಳೆದು ಹೋಗಿ
ತವಕಗಳು ಕೂಡುತ್ತ ಬಂದು ಎದೆಯನ್ನ ಜೋರಾಗಿ ಬಡಿಯುತ್ತ
ಒಳಗಿನ ಮೊತ್ತ ಎಣಿಸಲಾಗದೆ ಆಸೆಗಳು
ತನಗೆ ಬೇಕಾದ ಉತ್ತರವನ್ನೇ ಇಯುವವು
ತಾಳೆಯಾಗುವುದೋ ? ಎಂಬ ಪ್ರಶ್ನೆ ಸುತ್ತ ಪರಿಸರವ ಭಾರ ಮಾಡಲು
ಹಗುರಗೊಳಿಸುವ ತಾಕತ್ತು ನಿನ್ನೊಳಗೆ ಇದೆ ಎಂದು
ತಟ್ಟನೇ ನನ್ನೊಳಗೆ ಹೊಳೆದದ್ದು
ನನ್ನಾಸೆಗಳಿತ್ತ ಉತ್ತರವ ಕಣ್ಣಿಂದ ಕದ್ದು
ಮೋಹದಿಂದ ನೀನಿತ್ತ ಮಲ್ಲಿಗೆಯ ಮೃದು ಹಸ್ತಲಾಗವ ಅಲ್ಲವೇ?
 

ಗುರುವಾರ, ಆಗಸ್ಟ್ 21, 2014

ನಿನ್ನೆಡೆಗೆ ಬರುವ ಮುನ್ನ


ನಾ ನಿನ್ನಲ್ಲಿಗೆ ಬರುವೆನೆಂದೆ, ನೀ ನನ್ನ ಬರುವಿಕೆಗೆ ಹೂಂ ಎಂದೆ, ಅಳೆಯಲಾಗದ ಆಳದಲ್ಲಿ ಒಂದಿನಿತು ಅಳುಕಿಲ್ಲದ ಅತ್ಯುತ್ಸಾಹ ಒಮ್ಮೆಲೆ ಚಿಮ್ಮಿಸಿದ ಚೆಲುವುಗಳೆಲ್ಲ ಬರೆಯಿಸಿದವು ನೀ ನನ್ನ ಕಾವ್ಯಗಳಲ್ಲಿ ಕಂಡರೂ ಕಾಣದಂತೆ ಹುದುಗಿಕೊಂಡು ಮಾಡಿದ ಮೋಡಿಗಳನ್ನ. ನಿನ್ನನುರಾಗದಲ್ಲಿನ ಏರಲಾಗದ ಎತ್ತರಕೆ ಹಾರುವ ಇಚ್ಚಾ ಹಕ್ಕಿಯು ಹಳೆಯ ನೆನಪುಗಳ ಶಕ್ತಿಯಲಿ ತೆರೆದು ರೆಕ್ಕೆಗಳ ಸಾರುತಿದೆ ಹೊಸಾನುಭವದ ಆಗಸಕೆ ಮೈ ಒಡ್ಡಿ ತೇಲೋಣ ಬಾ ಎಂದು ಅಭಯ ನಿಶ್ಚಯಗಳಲ್ಲಿ.

ನಿನ್ನೆಡೆಗೆ ಬರುವ ಮುನ್ನ
=======================
ನಾ ನಿನ್ನಲ್ಲಿಗೆ ಬರುವ ಮುನ್ನ
ಇರುವ ದಾರಿಗಳೆಲ್ಲ ನಿನ್ನೆಡೆಗೆ ಸಾಗಲಿ
ಇರುಳು ಕಂಡ ಕನಸುಗಳು ನನಸಾಗಲಿ
ರೋಮಾಂಚನಗಳ ಸೃಶ್ಟಿಸಿದ ಕವನಗಳು ಹಾಡಲಿ
ಎಲ್ಲ ಮೇರೆಗಳ ದಾಟಿ ಹಕ್ಕಿ ಹಾರುವಂತೆ
ಹೊಸ ಬಾನ ಮುಟ್ಟಿದ ಸಂತಸದಲಿ
ದೂರಗಳು ಸನಿಹತೆಯ ಸೊಬಗ ಧರಿಸಲಿ
ಹಳೆಯ ನೆನಪುಗಳೆಲ್ಲ ಸಿಂಗರಿಸಿಕೊಂಡು ಸರದಿಯಲಿ ಕಾಯಲಿ
ನಿನ್ನ ನಿರಾಭರಣ ಚೆಲುವುಗಳೆಲ್ಲ ಶೃಂಗಾರ ಗೆಲುವಿನಲಿ
ಮೆರೆದು ನವ್ಯತೆಗಳಾಗಮನಕೆ ಸಜ್ಜಾಗಲಿ
ನಿರಂತರದಿ ನಿಂತು ನನ್ನ ಕಾವ್ಯಗಳಲ್ಲಿ
ನೆಟ್ಟ ಪ್ರೇಮದ ದಿವ್ಯ ದರುಶನದಲ್ಲಿ


-ಕವೆಂಪ

ಮಂಗಳವಾರ, ಜುಲೈ 29, 2014

ನಿನಗಾಗಿ ನನ್ನಲ್ಲಿ


ನನ್ನೆಲ್ಲವನು ಆವರಿಸುವ ನಿನ್ನೆಲ್ಲವುಗಳಿಗಾಗಿ ನನ್ನಲ್ಲಿ ಇರುವ ನಿಶ್ಕಲ್ಮಶ ಭಾವದ ದೀವಿಗೆಯಿಂದ ಹೊರಟ ಬೆಳಕು ಕತ್ತಲೆಗಳನ್ನ ಕತ್ತರಿಸಿ ಚಿರಕಾಲ ಪ್ರೇಮದ ಜ್ಯೊತಿಯಾಗಿ ನಿನ್ನೊಳಗುಡಿಯಲಿ ಜೊತೆಯಾಗಿ ಬೆಳಗಲಿ ಎಂಬ ಆಶಯದಲಿ..


ನಿನಗಾಗಿ ನನ್ನಲ್ಲಿ
----------------

ಹಸಿವಿನಿಂದ ಬಂದ ನಿನ್ನ ಯೋಚನೆಗಳಿಗೆ
ಉಣಬಡಿಸಲು ಸೆಳೆತಗಳಿವೆ ನನ್ನೆಲ್ಲ ಘಳಿಗೆಗಳಿವೆ

ಆಟವಾಡಲು ಹಟವ ಮಾಡುವ ನಿನ್ನ ನೆನಪುಗಳಿಗೆ
ಜೊತೆಗೆ ಸಲಿಗೆಗಳಿವೆ ಸನಿಹದ ಸರಸಗಳಿವೆ

ನನ್ನ ಕವನಗಳ ಓದುವ ನಿನ್ನ ಹಂಬಲಗಳಿಗೆ
ಬರೆಯಲು ಹೊರೆಗಳಿಲ್ಲದ ಸಡಗರಗಳಿವೆ, ಬಗೆಯ ಸ್ಪೂರ್ತಿಗಳಿವೆ

ಅರೆಕ್ಷಣ ಕಾಯದ ನಿನ್ನ ಕನಸುಗಳಿಗೆ
ಕದಿಯಲು ಕಾದ ನನ್ನ ಮನವಿದೆ, ಸೇರಲು ನಿನ್ನ ಮನೆಯಿದೆ

ಸರಳವಾಗಿ ಹರಿವ ಝರಿಯಂತಿರುವ ನಿನ್ನ ನಡೆಗಳಿಗೆ
ತಲೆದೂಗಿ ಬಾಗುವ ಸಂಯಮಗಳಿವೆ, ನಮಿಸುವ ನಮ್ರತೆಗಳಿವೆ

ಹಾಡುವ, ಜೊತೆಯ ಬೇಡಿ ಕಾಡುವ ನಿನ್ನಾಸೆಗಳಿಗೆ
ದನಿಗೂಡಿಸುವ ಸಂತಸಗಳಿವೆ, ಬೆರೆಯಲು ಕರೆಗಳಿವೆ

ಅವಿಸ್ಮರಣೀಯ ಅನುಭವದ ನಿನ್ನ ಅಪ್ಪುಗೆಗಳಿಗೆ
ಮೃದು ಮಲ್ಲಿಗೆಯ ಮುತ್ತುಗಳ ಮಡಿಲಿದೆ,  ಒಡಲಲಿ ಹೆಚ್ಚುವ ಮತ್ತುಗಳಿವೆ

ತೊರೆಯಲಾಗದ ನಿನ್ನ ಜೊತೆಗಳಿಗೆ
ಹೃದಯದಲ್ಲಿ ಚಿರಕಾಲ ಅಂಟಿಕೊಂಡ ಪ್ರೇಮದ ಕಲೆಗಳಿವೆ, ಅಲ್ಲಿ ನಿನಗಾಗಿ ನನ್ನ ಜೀವನ ಕಲೆ ಕಾದಿದೆ

                                                                                                                    --ಕವೆಂಪ




ಸೋಮವಾರ, ಜುಲೈ 14, 2014

ಮಳೆ ಮತ್ತು ನಾವಿಬ್ಬರು


ಮತ್ತೆ ಮಳೆ ಬಂದಿದೆ ! ಈಡೀ ಪ್ರಕೃತಿಯು ಈ ಪ್ರಕ್ರಿಯೆಗೆ ಮನಸೋತಿದೆ, ನಿನ್ನದೆ ಯೋಚನೆಗಳಲ್ಲಿ ಮಳೆಯಲ್ಲಿ ನಿಂತ ನಾನು ಹಸಿಯಾಗಲಿಲ್ಲ ಆದರೆ ನನ್ನ ಬಿಡದ ನಿನ್ನ ಮೋಹ ಹೃದಯದಲ್ಲಿ ನೆನಪಿನ ಮಳೆಯಿಂದ ಹಸಿಯಾಗಿದೆ.


ಮಳೆ ಮತ್ತು ನಾವಿಬ್ಬರು
==============

ಈ ಸಂಜೆ ಇಳಿದ ಮಳೆ
ರಾಶಿ ಮುತ್ತುಗಳ ಧಾರೆಯಾಗಿತ್ತು ನಮ್ಮಿಬ್ಬರ
ಮಳೆಯಲ್ಲಿನ ಜೊತೆಯಲ್ಲಿನ ಚಿತ್ರಗಳ ಚಿತ್ರಿಸಿತ್ತು

ಸುರಿದ ಒಂದೊಂದು ಹನಿಗಳಲ್ಲಿ
ಸೇರಿಕೊಂಡು ಕಳೆದ ದಿನಗಳು ನಿನ್ನ ಸ್ಪರ್ಶದಿಂದ
ಕಂಪಿಸಿದ ಘಳಿಗೆಗಳನ್ನ ಅಡಗಿಸಿಕೊಂಡು ಹೊಳೆಯುತಿತ್ತು

ಮಳೆಯ ಕೂಡಿಕೊಂಡ ಸಂಭ್ರಮದಲ್ಲಿ
ತೊಯ್ದ ಧರೆಯು ಹಾತೊರೆದು ತನ್ನೊಲವ ತೆರೆದು
ನವ ಚೈತನ್ಯದ ಕಂಪಿನಿಂದ ಕಂಗೊಳಿಸುತ್ತಿತ್ತು

ಸೃಷ್ಟಿಯ ಈ ಬಗೆಯ ಶೃಂಗಾರ ತಲ್ಲೀನತೆಯಲ್ಲಿ
ಪರವಶವಾದ ಪ್ರತಿ ಜೀವಿಯು ಈ ಸವಿಯ ಸವಿಯದವ
ಅರಸಿಕನೆಂಬ ಭಾವನೆಗಳ ಬಾಣಗಳನ್ನು ನನ್ನೆದೆಗೆ ಬಿಟ್ಟಿತ್ತು

ಹೊರಗೆ ಇಳೆ ಮಳೆಯ ನಿಲ್ಲದಾಟದಲ್ಲಿ
ನಿಂತು ನೋಟದಲಿ ಕಣ್ಣ ತುಂಬಿಕೊಂಡರೂ ಹಸಿಯಾಗದ ನನ್ನ
ಒಳಗೆ ಬಿಡದ ನಿನ್ನ ಮೋಹ ನೆನಪ ತಬ್ಬಿಕೊಂಡು ನೆನೆಯುತ್ತಲಿತ್ತು

ಶುಕ್ರವಾರ, ಜೂನ್ 27, 2014

ನಿನ್ನೊಲವಿನೆಡೆಗೆ


ಸನಿಹದ ಸವಿಯ ಮಧುರ ಕ್ಷಣಗಳ ನೆನಪಿಸಿಕೊಂಡಾಗ ಆಸೆ ಕನಸುಗಳಿಂದ ಸಂಗಾತಿಯ ಒಲವಿನ ಆಸರೆಯಲ್ಲಿ ಸೇರಬೇಕೆಂದು ತುಡಿಯುವ ಮನಸಿನ  ಕನವರಿಕೆಗಳು ಹರಿದಿವೆ ಭೋರ್ಗರೆದು !


ನಿನ್ನೊಲವಿನೆಡೆಗೆ
----------------

ಕ್ಷಣ ಕ್ಷಣಗಳು ಮಧುರ
ಆ ನಿನ್ನ ಸನಿಹ ಸುಖದ ನೆನಪುಗಳು
ತನು ಮನಗಳ ಕಣ ಕಣಗಳಲ್ಲಿ
ಅಮರವಾಗಿ ನೆಲೆಸಿಹವು

ಹರಿವ ನೆತ್ತರಿಗೂ ತಿಳಿದಿದೆ
ನಿನ್ನ ಹೆಸರು, ಉಸಿರಾಡಿದಾಗಲೆಲ್ಲ
ಹೆಚ್ಚುತ್ತಿವೆ ನಿನ್ನೊಲವಿನ ಬಡಿತಗಳು

ಪ್ರವಾಹವೇ ಉಕ್ಕುತ್ತಿದೆ
ಭೋರ್ಗರೆದು ಕರೆಯುತ್ತಿವೆ
ಕನವರಿಕೆಗಳ ಹಿತವಾದ ನರಳಿಕೆಗಳಲ್ಲಿ

ಮೌನಗಳಲ್ಲಿ ಬಚ್ಚಿಟ್ಟ ಆಸೆಗಳ
ತರುವೆ ನಾನು ನಿನ್ನೆಡೆಗೆ
ತೆರೆದು ನಿನ್ನ ಎದೆಯ ಗೂಡಲ್ಲಿ
ಬಿಚ್ಚಿಟ್ಟು ನನ್ನ ನಿನ್ನ ಸನಿಹದ ಒಗಟುಗಳ
ಬೆಚ್ಚನೆಯ ಸುಖದ ಭಾವಗಳಲ್ಲಿ
ಕಣ್ಣ ಕದಗಳ ಮುಚ್ಚಿ
ನಿನ್ನಲ್ಲಿ ಒಂದಾಗುವೆ

ಶುಕ್ರವಾರ, ಜೂನ್ 20, 2014

ನಿನ್ನ ಸನಿಹ


ಸಹಜವಾಗಿ ಒಮ್ಮೆ ಸಂಗಾತಿಯ ಸಂಗದಿಂದ ಮಿಂದ ಪ್ರೇಮಿಯ ಮನಸು ಜಗದ ಎಲ್ಲ ಸುಖಗಳನು ದೂರವಿಟ್ಟು, ಸನಿಹಕ್ಕಾಗಿ ಹಾತೊರೆದು ಸುಂದರ ಕ್ಷಣಗಳನ್ನ ನೆನೆಯುತ್ತಿರಲು ಹರಿದ ಭಾವನದಿಗಳೆಲ್ಲ ಪ್ರೇಮ ಸಾಗರದಲ್ಲಿ ಒಂದಾಗಿವೆ.


ನಿನ್ನ ಸನಿಹ
-----------

ನಿನ್ನ ಸನಿಹದ ಮುಂದೆ
ಜಗವೆಲ್ಲ ಬಾಗಿಹುದು
ಸುಮ್ಮನಿಹವು ಇನ್ನೆಲ್ಲ ಇಹದ ಸುಖಗಳು
ಇದಿರು ನುಡಿಯದೆ ಹಿಂಜರಿದು

ತಂಗಾಳಿ ತಂಪಿನ ಬಗೆಯದು
ನಿನ್ನ ಮೈ ಕಾಂತಿ ಬೆದರಿಸಿ ಬಿಸಿಲನು
ಬಿಗಿದಂತೆ ಕೋಮಲ ಹೂವನು

ಮುಖದಿ ನಿಂತ ನಿನ್ನ ನಗುವು
ಬಳಸುವ ಬಳ್ಳಿಯ ಹಾಗೆ
ಬಯಸಿತ್ತು ಸದಾ ಸಂತಸದ ಮಡಿಲು

ಮಿಂಚಲ್ಲ ನಿನ್ನ ಕಣ್ಣ ಹೊಳಪು
ನೋಟದಲಿ ನೂರು ಕನಸು
ಹೊತ್ತಿಸಿಹುದು ಹೊಸಬೆಳಕು

ಬಿಚ್ಚದೆಯೆ ನಿನ್ನ ತುಟಿಗಳನು
ನುಡಿಸಿದೆ ಬಿಸಿ ಉಸಿರ ಸರಿಗಮಪ
ಕಾಡಿದೆ ಕುಣಿಸಿದೆ ನಲಿಸಿದೆ
ನನ್ನೆದೆಯಲಿ ತಣ್ಣನೆಯ ನಿನ್ನೊಲುಮೆಯ ತಕದಿಮಿತ

ಗುರುವಾರ, ಫೆಬ್ರವರಿ 13, 2014

ಹೂವಿನಂತ ಹೃದಯವಿರಲಿ


ಮನೆಯ ಅಂಗಳದಲ್ಲಿ ಅರಳಿದ ಹೂವ ನೋಡುತ್ತ ನಿಂತಿದ್ದೆ, ಅದರ ಚೆಲುವನ್ನ ಕಣ್ಣಲ್ಲಿ ತುಂಬಿಕೊಂಡೆ ಹಾಗೆ ಹೃದಯದಲ್ಲಿ ಹೂವಿನಂತಾಗಬೇಕೆಂಬ ಬಯಕೆಯಿಂದ ಪೋಣಿಸಿದೆ ಈ ಬಿಡಿ ಹೂಗಳನ್ನ ಈ ಕವಿತೆಯಲ್ಲಿ.

ಹೂವಿನಂತ ಹೃದಯವಿರಲಿ
-----------------------

ಎಲ್ಲ ಹೂಗಳು ಚೆಂದ
ಸಹಜ ಸೊಬಗಿನಿಂದ
ಸೂಸೂವ ಪರಿಮಳದಿಂದ

ನೋಟ ನಿಲ್ಲಿಸಿ ಮೊಗ್ಗಲ್ಲಿ
ನವಿರಾಗಿ ಅರಳಿ ನಗುವ ಹೂವಲ್ಲಿ
ಎಂಥ ಸೊಗಸು, ಉತ್ಸಾಹ !

ಭಯವಿಲ್ಲ ಬೆಳೆಯುವಲ್ಲಿ
ಇಲ್ಲ ಅಹಂಕಾರ ಅರಳುವಲ್ಲಿ
ಹೊಳೆಯುತಿದೆ ಆನಂದದಲ್ಲಿ

ಕಿತ್ತರೂ ಕಿಂಚಿತ್ತು ಕೋಪವಿಲ್ಲ
ಯಾವ ಚಿಂತೆಗಳಿಲ್ಲ ಕನಸುಗಳಿಲ್ಲ
ಯಾರ ಬೇಡುವುದಿಲ್ಲ ಯಾರ ಕಾಡುವುದಿಲ್ಲ

ಎಲ್ಲಿ ಸೇರುವುದೋ ?
ಮಾನಿನಿಯ ಮುಡಿಗೋ ?
ಮಂದಿರವೋ ?
ಮಸಣವೋ ?
ತಿಳಿದಿಲ್ಲ ಅದಕೆ

ಮತ್ತೆ ಮತ್ತೆ ಹರಡಿದೆ
ಅದರ ಚೆಲುವು ಎಲ್ಲೆಡೆ
ಸಾರುತಿದೆ ಜಗಕೆಲ್ಲ
ಇರುವಷ್ಟು ದಿವಸ
ಹಸಿರ ನೀಡುವ ಉಸಿರ ಉಳಿಸೆಂದು
ಒಳಿತ ಬೆಳೆಸೆಂದು
ಪ್ರೀತಿಸುವವರಿಂದ ಪ್ರೀತಿಸುವವರಿಗೆ
ವಿನಯದಿಂದ

ಭಾನುವಾರ, ಫೆಬ್ರವರಿ 9, 2014

ಅರಿವು - ಒಲವು



ನನ್ನ-ನನವಳ ಮಧ್ಯೆ ನಡೆದ, ಕೆಲ ಆತ್ಮೀಯರ ಜೀವನದ ಸಿಹಿ ಕಹಿ ಘಟನಾವಳಿಗಳ ನೆನೆಯುತ್ತಿರುವಾಗ  ನನ್ನಲ್ಲಾದ ಅನುಭವಗಳು ನನ್ನ ಲೇಖನಿಯ ಸೆರೆ ಸಿಕ್ಕು ಕಂಡ ಒಂದು ರೂಪವನ್ನು ನಿಮ್ಮೆದುರಿಗಿಡಲು ಬಯಿಸಿದೆ.


ಅರಿವು-ಒಲವು
------------
ಎಳೆಯುತಿದೆ ಎದೆಯೊಳಗೆ ನೆನಪೊಂದು
ಸೆಳೆಯುತಿದೆ ನಿನ್ನೆಡೆಗೆ

ಕಳೆದುಕೊಂಡು ಸಲಿಗೆಯ ದೂರವಾದ ಸ್ನೇಹವ
ಭಾರದಿಂದ ಬಳಲಿದ ಹೃದಯದ ಒಳೊಲುಮೆ
ಅಹಮಿನ ಕುಲುಮೆಯಲ್ಲಿ ನರಳಿದೆ
ಮುನಿಸು ಮನಸುಗಳು ಎತ್ತರಕೆ ಬೆಳೆದು
ಕಳೆದ ಕಾಲಗಳಲ್ಲಿ ಬಲಿತ ಭಾವಗಳ ಕೊಂದು
ಗಹಗಹಿಸಿ ನಕ್ಕು ಅಳುವನ್ನಾಳಿವೆ

ಕೆದಕುತ್ತವೆ ಹೂಬಳ್ಳಿಯ ಮುಳ್ಳುಗಳು
ಕಲಕುತ್ತವೆ ಹಾಲುಜೇನ ಆನಂದವನು
ಕಂಡ ಎಲೆಯ ಹಸಿರು ಒಣಗುತ್ತಿದೆ
ಬುಡವ ಬಿಡದ ಬೇರು ಉಸಿರ ನೀಡುತ್ತಿದೆ

ಬಿಸಿಲೇರಿ ತಂಪಾಗಿದೆ
ಮಳೆ ಬಂದು ನಿಂತಾಗಿದೆ
ಚಳಿ ನಡುಗಿಸಿ ಬಿಟ್ಟಿದೆ
ಏರಿದ ತಾಪ ಇಳಿಯುತ್ತಿದೆ ಸಹಜವಾಗಿ

ಜಡವಾಗಿ ಬಡವಾಗಿ ಮುಚ್ಚಿದೆದೆಯ ಕದವ ತೆರೆದು
ಸರಿ-ಬೆಸಗಳ ಗೊಂದಲಗಳ ನಿದಿರೆಗೆ ಸರಿದಂತರಂಗವ
ಬಡಿದು ಎಬ್ಬಿಸಿದವು ಜೀವತರಂಗಗಳು
ಕತ್ತಲೆಯನ್ನು ಬೆತ್ತಲೆಗೊಳಿಸಿ ಬಯಲೊಳು ನೂಕಿ ಓಡಿಸಿ
ಒಂದಾದವು ಆತ್ಮಗಳು ಅರಿವಿನ ಸ್ಪರ್ಷದಲಿ


ಗುರುವಾರ, ಜನವರಿ 23, 2014

ದಾರಿ ಮುಗಿಸಿದ ಬಂಡಿ : ಯಶವಂತ ಹಳಿಬಂಡಿಯವರಿಗೊಂದು ಅಂತಿಮ ನಮನ


ಬಾಲ್ಯದಲ್ಲಿ ನನ್ನನ್ನು ಮೊಟ್ಟ ಮೊದಲು ಭಾವಗೀತೆಗಳ ಕಡೆಗೆ ಸೆಳೆದ ಒಂದು ಹಾಡೆಂದರೆ, ಅದೇ  ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದಿವಂಗತ ಶ್ರೀ ದ.ರಾ.ಬೇಂದ್ರೆಯವರ ಪಾತರಗಿತ್ತಿಯ ಹಾಡು ’ಪಾತರಗಿತ್ತಿ ಪಕ್ಕಾ ನೊಡಿದೇನ ಅಕ್ಕಾ...’. ಅದನ್ನ ಮನಮೋಹಕವಾಗಿ ಹಾಡಿ ನಾಡಿನ ಗಮನ ಸೆಳೆದದ್ದು  ಶ್ರೀ ಯಶವಂತ ಹಳಿಬಂಡಿಯವರು. ಮೊನ್ನೆ ಅವರು ನಮ್ಮನಗಲಿದರು. ಸುಗಮ ಸಂಗೀತ ಗಾಯಕರೆಂದೇ ಪ್ರಸಿದ್ಧಿ ಪಡೆದ ಯಶವಂತ ಹಳಿಬಂಡಿಯವರ ಆತ್ಮಕ್ಕೆ ಶಾಂತಿ ಸಿಗಲೆಂದು ಕೋರುತ್ತ, ಅವರಿಗಾಗಿ ನನ್ನ ಈ ಹಾಡನ್ನು ಸಮರ್ಪಿಸಿ ಅಂತಿಮ ನಮನಗಳನ್ನು ಸಲ್ಲಿಸುತ್ತಿದ್ದೇನೆ.

ದಾರಿ ಮುಗಿಸಿದ ಬಂಡಿ
---------------------------
ಬಂಡಿ ಬಂದಿತ್ತ ತಂಗಿ ಊರಿಗೆ ಬಂಡಿ ಬಂದಿತ್ತ
ಜನಮನ ಸೆಳೆದಿತ್ತ ತಂಗಿ ಬಂಡಿಯ ಗಾಲಿ ಹರಿದಿತ್ತ
ಆಡಿ ಓಡಿ ಮೋಡಿ ಮಾಡಿ ಮೂಡಿಸಿದ ಗುರುತು ಹೆಚ್ಚಿತ್ತ ತಂಗಿ ದಾರಿ ಸರಿದಿತ್ತ
ಸಾಗಿ ಬಂದಿತ್ತ ತಂಗಿ ಬಂಡಿ ಎತ್ತರ ಏರಿತ್ತ
ಏರುತ ಇಳಿಯುತ ಸಂಜೆಯಾಗಿತ್ತ ತಂಗಿ ಬಂಡಿಗೆ ಇನ್ನೂ ಹಸಿವಿತ್ತ
ತಿರುಗುತ ಕರಗುತ ದಣಿದಿತ್ತ ತಂಗಿ ಗಾಡಿ ಸೋತಿತ್ತ
ಸಂಚು ನಡಿದಿತ್ತ ತಂಗಿ ಬಂಡಿಯ ಕೆಡವಲು ಕಾಲವು ಕಾದಿತ್ತ
ಕೊಂಡಿಯು ಕಳಚಿತ್ತ ತಂಗಿ ಬಂಡಿ ನೆಲಕ್ಕೆ ಉರುಳಿತ್ತ
ಕೇಡನು ಬಯಸದ ಕೀರ್ತಿಯ ಬೇಡದ ಮೂರ್ತಿಯಾಗಿತ್ತ ತಂಗಿ ಬಂಡಿಯು ಗುಡಿಯನು ಸೇರಿತ್ತ
ಎಲ್ಲ ಮುಗಿದಿತ್ತ ತಂಗಿ ಬಂಡಿಯು ಊರಿನ ಯಾತ್ರೆಯ ಮುಗಿಸಿತ್ತ

ಬುಧವಾರ, ಜನವರಿ 22, 2014

ನನ್ನ ಕನ್ನಡ ಭಾಷೆ


ಮೊನ್ನೆ ನನ್ನ ಆಪ್ತ ಕನ್ನಡಿಗ ಸ್ನೆಹಿತನೊಬ್ಬನ ಜೊತೆ ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡುತ್ತಿರಬೆಕಾದರೆ, ನನಗೆ ಒಬ್ಬರ ಸಂಚಾರಿ ದೂರವಾಣಿ ಸಂಖ್ಯೆ ಬೇಕೆಂದು ಕೇಳಿದ ತಕ್ಷಣವೇ ನನ್ನ ಗೆಳೆಯ ಆಂಗ್ಲ ಬಾಷೆಯಲ್ಲಿ ನೈನ್, ನೈನ್, ಏಟ್.. ಎಂದು ಸಂಖ್ಯೆಗಳನ್ನುದುರಿಸಿದ್ದನು. ಹಾಗೆ ಅವುಗಳನ್ನ ಹೆಕ್ಕಿ ಬರೆದುಕೊಂಡು, ಬರೆದದ್ದನ್ನ ಪರೀಕ್ಷಿಸಲು ಮತ್ತೆ ಅವನಿಗೆ ಕನ್ನಡದಲ್ಲಿ ಒಂಬತ್ತು, ಒಂಬತ್ತು, ಎಂಟು .... ಎಂದು ಹೇಳುತ್ತಲೇ ಅವನಿಗೆ ತುಂಬ ಕಷ್ಟವಾಗಿ ತಡೆದುಕೊಳ್ಳಲಾಗದೆ "ಇಂಗ್ಲೀಷ್ ನಲ್ಲಿ ಹೇಳಿಲ್ಲ ಅಂದ್ರೆ ನಾನು ಸುಮ್ನೆ ಸರಿ ಅಂತ ಹೇಳಿ ಫೋನಿಟ್ಟುಬಿಡ್ತೀನಿ" ಎಂದು ಖಾರವಾಗಿ ಹೇಳಿದ ಮಾತುಗಳು ನನ್ನ ಕಿವಿಯಲ್ಲಿ ಇನ್ನು ಹಾಗೆ ಮೋಳಗುತ್ತಿರುವ ಹೊತ್ತಲ್ಲಿ, ಅತ್ತ ಮಡಿಕೇರಿ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ ಮುಗಿಯುತ್ತಲಿತ್ತು. ನಾನು ನನ್ನೊಳಗೆ ಪ್ರಶ್ನಿಸಿಕೊಂಡೆ, ಯಾರಿಗಾಗಿ ಈ ಸಮ್ಮೇಳನಗಳು ? ಯಾತಕ್ಕಾಗಿ ಈ ಸಮ್ಮೇಳನಗಳು ? ಕನ್ನಡಿಗರಿಗೆ ನಿಜಕ್ಕೂ ಕನ್ನಡದ ಬಗ್ಗೆ ಕಳಕಳಿ ಇದೆಯೆ? ನಿಜಕ್ಕೂ ಈ ಪ್ರಶ್ನೆಗಳು ಕನ್ನಡವನ್ನ ಪ್ರೀತಿಸುವ ಜನರ ಕಾಡದೆ ಬಿಡುವುದಿಲ್ಲ.

ಹೀಗೆ ಯೋಚಿಸುತ್ತ, ಗೆಳೆಯನಿಗೆ ಉತ್ತರವಾಗಿ ನನ್ನೊಳಗಿನ ಕನ್ನಡಪರ ದನಿಯ ಧ್ವನಿಸಲೆಂದೆ ಬರೆದೆ ಈ ಬರಹ.
ಇಲ್ಲಿ ಕನ್ನಡಕೆ ಬೇಕೆಂದರೆ ಕಳಕಳಿ ಇಂಗ್ಲೀಷ್ ಕನ್ನಡಕವನ್ನಾಚೆ ಇಡಬೆಕು.

ಲೋಕದ ಡೊಂಕವ ತಿದ್ದಲು ನಾನಾರು? ಮೊದಲು ನನ್ನ ತಿದ್ದಿಕೊಂಡೆ.

ನಿತ್ಯ ನಾ ಬಳಸುವ ಆಂಗ್ಲ ಪದಗಳಿಗೆ ಕನ್ನಡ ಪದಗಳಿವೆಯೆ ಎಂದು ಹುಡುಕಿದೆ.
ಕೆಲವೆ ಕೆಲವು ಪದಗಳನ್ನುಳಿದು ಎಲ್ಲದವಕ್ಕೂ ಕನ್ನಡದಲ್ಲಿ ಪದಗಳಿವೆ ಎಂದರ್ಥವಾಯಿತು.
ನಂತರ ನಾನ್ಯಾಕೆ ಈ ಪದಗಳನ್ನ ಬಳಸೋದಿಲ್ಲ ಎಂದು ಯೋಚಿಸಿದಾಗ ಹೊಳೆದದ್ದು ಈ ಕೆಳಗಿನ ಕಾರಣಗಳು, ಅವುಗಳಲ್ಲಿ ಮುಖ್ಯವಾಗಿ

೧. ಈ ಪದಗಳನ್ನಾಡಿದಾಗ ಕೇಳುಗನೇನೆಂದುಕೊಳ್ಳುವನೋ ಎಂದು ಒಂಥರ ಮುಜುಗರ
೨. ಉದ್ದನೆಯ ಕನ್ನಡ ಪದಗಳು, ಬಹುಬೇಗನೆ ಅರ್ಥವಾಗುವ ಕಿರಿದಾದ ಆಂಗ್ಲ ಪದಗಳು
೩. ತತಕ್ಷಣಕ್ಕೆ ಹೊಳೆಯುವ ಆಂಗ್ಲ ಪದಗಳು (ಹೊಳೆಯದ ಕನ್ನಡ ಪದಗಳು?)
೪. ಆಧುನಿಕ ತಂತ್ರಜ್ಞಾನದ ಆವಿಷ್ಕಾರಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಳಕೆಯಾಗುತ್ತಿರುವ ಯಂತ್ರಗಳು ಮತ್ತು ಅದಕ್ಕೆ ಸಿಗದ ಸ್ಪಷ್ಟ ಕನ್ನಡ ಪದಗಳು
೫. ಈ ಎಲ್ಲದಕ್ಕೂ ಮಿಗಿಲಾಗಿ ಭಾಷೆಯ ಬಗೆಗಿನ ನಿರುತ್ಸಾಹ, ಹೆಮ್ಮೆಯ ಕೊರತೆ

ಈ ಮೇಲಿನ ನಾಲ್ಕನೆಯದು ಸ್ವಲ್ಪ ಕಷ್ಟದ್ದು ಯಾಕೆಂದರೆ, ಅದನ್ನು ಯಾರೋ ಪರದೇಶದವರು ಕಂಡುಹಿಡಿದಿರುತ್ತಾರೆ ಕಾರಣ ನಮ್ಮಲ್ಲಿ ಪರ್ಯಾಯ ಪದ ಸಿಗದೇ ಹೋಗಬಹುದು. ಸಿಕ್ಕರೆ ಒಳಿತು, ಸಿಗದಿರೆ ಹೊಗಲಿ ಬಿಡಿ.

ಮೊದಲಿನ ಮೂರಕ್ಕೆ ಹಾಗು ಕೊನೆಯದಕ್ಕೆ ಕಾರಣಗಳೇನು? ಮೊದಲನೆಯದು, ಮುಜುಗರಕ್ಕೆ ಕಾರಣ
ನಾನು ಹೆಚ್ಚಾಗಿ ಆ ಪದವನ್ನ ಬಳಸಿಲ್ಲ ಆದ್ದರಿಂದ, ಹಾಗೆ ನನ್ನ ಸುತ್ತಲಿನ ಜನರ ಜೊತೆ ಮೊದಲನೆ ಬಾರಿ ಈ ಪದಗಳ ಪ್ರಯೋಗ ಮಾಡುತ್ತಲಿದ್ದೇನೆ ಅದಕ್ಕಾಗಿಯೆ ಎಂಬ ದೃಢ ನಿಲುವಿಗೆ ಬಂದೆ.
ನಂತರ ಇದನ್ನ ಹೊಗಲಾಡಿಸಲು, ಹೀಗೆ ಕನ್ನಡ ಶಬ್ಧಗಳ ಬಳಕೆಯ ಬಗ್ಗೆ ನನ್ನ ಸುತ್ತಲಿನ ಜನರ ಜೊತೆ ಮೊದಲೇ  ತಿಳಿಸಿ ನನ್ನ ಪ್ರಯತ್ನಕ್ಕೆ ಸ್ಪಂದಿಸಲು ಕೋರಿದೆ. ನನಗೆ ಇದರಿಂದ ಸಂಪೂರ್ಣ ಪ್ರೋತ್ಸಾಹ ಸಿಕ್ಕಿತು, ಮುಂದುವರೆಸುತ್ತಿದ್ದೇನೆ. ನನಗಿಲ್ಲ ಆ ಸಮಸ್ಸ್ಯೆ ಈಗ.

ಇನ್ನು ಎರಡನೆಯದು, ನನ್ನ ಶಕ್ತಿ ಹಾಗು ಕನ್ನಡ ಶಬ್ಧಜ್ಞಾನದ ಅನುಸಾರವಾಗಿ ಕಿರಿದಾದ, ಸರಿಯಾದ ಪದಗಳ ಹುಡುಕಿದೆ, ಹಾಗೆ ಅದನ್ನು ತತಕ್ಷಣ ಬಳಸಲೂ ಶುರು ಮಾಡಿದೆ. ಉದಾಹರಣೆಗೆ,

ಟೇಬಲ್ ಬದಲಿಗೆ ಮೇಜು
ಚೇರ್ ಬದಲಾಗಿ ಕುರ್ಚಿ
ಗುಡ್ ಮಾರ್ನಿಂಗ್ ಬದಲಿಗೆ ಶುಭ ಮುಂಜಾನೆ
’ಕ್ಲೀನ್ ಮಾಡು’ ಬದಲಿಗೆ ’ಸ್ವಚ್ಛ ಮಾಡು’
'ಬೊರ್ ಆಗ್ತಾ ಇದೆ' ಅನ್ನುವ ಬದಲು ’ಬೆಸರ ಆಗ್ತಾ ಇದೆ’
'ಟೈಮ್ ಎಷ್ಟು' ಪ್ರತಿಯಾಗಿ ’ವೇಳೆ ಎಷ್ಟಾಗಿದೆ’
'ಪೇಪರ್ ಬಂತಾ' ಗೆ ’ಪತ್ರಿಕೆ ಬಂತಾ’ ಎಂದು
'ಮಾರ್ನಿಂಗ್ ವಾಕ್ ಹೊಗಿದ್ರಾ?' ಎನ್ನುವ ಬದಲು ’ಮುಂಜಾನೆ ನಡಿಗೆಗೆ ಹೊಗಿದ್ರಾ?’
ಇತ್ಯಾದಿ ಪದ ಪ್ರಯೋಗ ಕಷ್ಟ ಅನ್ನಿಸಲೇ ಇಲ್ಲ.

ಮೂರನೇಯದಾಗಿ, ಯಾವುದೆ ಭಾಷೆಯ ಶಬ್ದಗಳು ಬಳಸದೆ ಹೊದರೆ ತತಕ್ಷಣಕ್ಕೆ ಹೇಗೆ ತಾನೆ ಹೊಳೆಯುವುದು? , ಹಾಗೊಂದು ವೇಳೆ ನನಗೆ ಕನ್ನಡ ಪದವೇ  ದೊರಕದಿದ್ದಲ್ಲಿ ಸುಮ್ಮನೆ ಕಷ್ಟ ಪಡದೆ ಸಿಗುವ ಆಂಗ್ಲ ಪದ ಬಳಸಿ ಮಾತು ಮುಗಿಸಿ, ನಂತರ ನನ್ನಲ್ಲೇ ಯೋಚಿಸಿಯೋ, ತೀಳಿದವರ ಹತ್ರ, ಅಥವ ಕನ್ನಡ-ಇಂಗ್ಲಿಷ್-ನಿಘಂಟು ಸಹಾಯದಿಂದ ತಿಳಿದುಕೊಂಡು ಮುಂದಿನ ಸಾರಿ ಆ ಪದದ ಬಳಕೆ ಮಾಡುತ್ತೇನೆ. ಹಾಗೆ ಸುತ್ತಲಿನ, ಹತ್ತಿರದ ಜನ ಯಾರದ್ರು ಕನ್ನಡ ಪದಗಳಿದ್ರೂ, ಅಂಗ್ಲ ಪದ ಬಳಸಿದಾಗ ನಾನು ಅವರು ಹೇಳಿದ್ದನ್ನೆ ಇನ್ನೊಂದು ಸಾರಿ ಕನ್ನಡ ಪದಗಳನ್ನ ಬಳಸಿ ಹೇಳಿ ಅವರಿಗೆ ಕನ್ನಡ ಪದಗಳ ಪರಿಚಯ ಮಾಡಿಕೊಡುತ್ತೇನೆ ಹಾಗೆ ಬಳಸುವುದರ ಬಗ್ಗೆಯು ತಿಳಿಸುತ್ತೇನೆ. ಹೀಗೆ ನನ್ನ ಕನ್ನಡ ಶಬ್ದ ಭಂಡಾರ ದಿನೇ ದಿನೇ ವೃಧ್ಧಿಸುತ್ತಿದೆ.

ಕೊನೆಯದಾಗಿ, ಭಾಷೆಯ ಬಗ್ಗೆ ಅಭಿಮಾನ ಬೇಕು ಅಂಧಾಭಿಮಾನವಲ್ಲ, ಪ್ರೀತಿ ಬೇಕು ಅಹಂಕಾರವಲ್ಲ, ಇಲ್ಲದಿದ್ದಲ್ಲಿ ನನ್ನತನದ ಪ್ರತೀಕ  ಏನು? ಭಾಷೆ ಕಲಿತಷ್ಟು ಒಳ್ಳೆಯದೇ, ಆದರೂ ತಾಯಿ ಭಾಷೆಯ ಬಗೆಗಿನ ಒಲವಿನ ಬಯಕೆ ಸಹಜವೇ ತಾನೇ ?  

ಒಮ್ಮೆ ಯೊಚಿಸಿ, ನಾವು ಬರಿ ಆಂಗ್ಲ ಪದಗಳನ್ನ ಬಳಸಿದರೆ ನಮ್ಮ ಮುಂದಿನ ಪೀಳಿಗೆಗೆ ಅಂದರೆ ನಮ್ಮ ಮಕ್ಕಳಿಗೆ ನಾವು ಆಂಗ್ಲವನ್ನೆ ಹೇಳಿಕೊಟ್ಟಂತಾಯಿತಲ್ಲವೆ?, ಹಾಗೆ ಮಾಡಿದರೆ ಈ ಕನ್ನಡ ಪದಗಳು ಮರೆಯಾಗಿ ಸ್ವಲ್ಪ ಕಾಲದಲ್ಲೆ ಕನ್ನಡ ಭಾಷೆ ನಶಿಸಿ ಹೋಗಿ ಅಂಗ್ಲವೇ ನಮ್ಮ ಭಾಷೆಯಾದರೂ ಅಚ್ಚರಿಯಿಲ್ಲ. ಶತ ಶತಮಾನಗಳಿಂದ ಎಳೆದು ತಂದ ಕನ್ನಡದ ರಥ ನಮ್ಮಿಂದಾಗಿ ನಿಲ್ಲಬೇಕೆ? ನಮ್ಮ ಕೈಲಾದಷ್ಟಾದರೂ ನಾವು ಮಾಡ ಬೇಡವೇ? ನಮ್ಮ ಪೂರ್ವಾಜರಾದ ಕನ್ನಡದ ಆದಿ ಕವಿಗಳೆಂದು ಪ್ರಖ್ಯಾತರಾದ ಪಂಪ, ರನ್ನ, ಜನ್ನ ರಿಂದ ಹಿಡಿದು, ಇತ್ತೀಚಿಗಷ್ಟೆ ನಮ್ಮನಗಲಿದ ದಿವಂಗತ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ನವರವರೆಲ್ಲರೂ, ಪ್ರಸ್ತುತ ಚಾಲ್ತಿಯಲ್ಲಿರುವ ಕವಿಗಳೂ ಬೆಳೆಸಿಕೊಂಡು ಬಂದಿರುವ ಈ ಯಾತ್ರೆ ನಮ್ಮಿಂದಾಗಿ ಮೋಟಕುಗೊಳ್ಳಬಾರದು. ನಮ್ಮ ಮಕ್ಕಳು ಕನ್ನಡದ ಕಂಪನ್ನ ಸೇವಿಸಲಿ, ನಾಳೆ ಅವರೂ ಈ ಯಾತ್ರೆಯ ಭಾಗವಾಗಬೇಕಾದರೆ ಇವತ್ತು ಅವರ ಸುತ್ತ ಕನ್ನಡದ ಪದಗಳು ಮೊಳಗಬೇಕು. ನಮ್ಮ ಮಕ್ಕಳನ್ನ ಯಾವುದೆ ಮಾದ್ಯಮಕ್ಕೆ ಕಳಿಸಿದರೂ, ಅವರಿಗೆ ಕನ್ನಡ ಮನೆ ಮಾತಾಗಬೇಕು. ಇದಕ್ಕೆ ಪೂರಕವಾಗಿ ನಾನು ನನ್ನ ಮಕ್ಕಳಿಗೆ ಮಾತನಾಡುವಾಗ ಪೂರ್ಣ ವಾಕ್ಯ ಒಂದೇ ಭಾಷೆಯಲ್ಲಿರಲಿ ಎಂದು ತಿಳಿಸಿದ್ದೇನೆ. ಕನ್ನಡವೇ  ಆಗಲಿ, ಆಂಗ್ಲವೇ ಆಗಲಿ ಅದು ಕನ್ನಡ, ಆಂಗ್ಲ ಶಬ್ದಗಳ ಮಿಶ್ರಣ ಆಗದಂತೆ ತಡೆಯುತ್ತಿದ್ದೇನೆ. 

ಈ ಎಲ್ಲ ಬರೆಯುವಾಗ ನನ್ನಲ್ಲಿ ಒತ್ತಿ ಬಂದ ಕನ್ನಡದ ಬಗೆಗಿನ ಪ್ರೀತಿಯನ್ನ  ಕೆಳಗಿನ ಸಾಲುಗಳಲ್ಲಿ ಪೋಣಿಸುತ್ತಿದ್ದೇನೆ. 
ಇದು ನನ್ನ ಆಪ್ತ ಸ್ನೇಹಿತನಿಗಾಗಿಯೇ ರಚಿತವಾದದ್ದು, ಇದನ್ನೋದಿದ ಅವನಿಗೂ, ಸಹೃದಯಿ ಬಳಗಕ್ಕೂ ಸ್ವಲ್ಪವಾದರೂ ಮನ ಮುಟ್ಟಿದರೆ ನನ್ನ ಕಿರು ಶ್ರಮ ನನಗೆ ತೃಪ್ತಿಯನ್ನು ಹಾಗೆ ಸ್ಪೂರ್ತಿಯನ್ನು ಕೊಡುತ್ತೆ.


ಕನ್ನಡ ಭಾಷೆ
--------------
ಮುಜುಗರ ಸಲ್ಲದು ಗೆಳೆಯ
ಆತ್ಮಕ್ಕಿದು ಸವಿರುಚಿಯ ಬಾಷೆ
ಸವಿದರಷ್ಟೆ ತಿಳಿದೀತಿದರ ಸಿಹಿಯ
ಪದ ಸರಿಗಮಗಳ ಪರಿಮಳದಿ ಘಮಘಮಿಸುವ ಬಾಷೆ

ಸಿರಿಯಿದೆ ನೆಲಕೆ ಶ್ರಿಮಂತ ಸಂಸ್ಕೃತಿಯ
ಯುಗ ಯುಗಗಳ ಪರಿಯ ಬರೆದು ತಿಳಿಸಿದ ಭಾಷೆ
ಕಲ್ಲಿನಲಿ ರಸಗಳ ನರ್ತನಗಳ ಕಲೆಯು
ತೆರೆದು ವಿಶ್ವಕೆ ಕರೆದ ಹೃದಯದ ಭಾಷೆ

ಗಿರಿ ಘಟ್ಟ ಬಯಲು ಬೆಡಗಿನ ಧರೆಯ
ನಿತ್ಯ ಹರಿವ ನದಿಗಳ ತಂಪ ತಂದು ಕಂಪ ಹರಿಸಿದ ಹಸಿರಿನ ಭಾಷೆ
ವನದಿ ಕಾನನಗಳಲಿ ಅಲೆದು ನಲಿವ ಜೀವ ಸಂಕುಲಗಳು ಭೀತಿಯ
ಮರೆತು ಕಲೆತು ಬಾಳುವಂತೆ ಪಸರಿಸಿಹ ಪರಿಸರದ ಭಾಷೆ

ಮನದಿ ನಯ ವಿನಯಗಳ ಗಾನ ಸುಧೆಯು
ಹರಿಸಿ ತಿದ್ದಿ ತೀಡಿದ ಗುಣವ ಕೊಡುವ ಭಾಷೆ
ಪ್ರೀತಿ ರೀತಿ ನೀತಿ ಕಲಿಸಿ ರಕ್ತಿ ಶಕ್ತಿ ಭಕ್ತಿಯ
ಉಣಿಸಿ ಉಳಿಸಿ ಹರಸಿ ಬೆಳೆಸಿ ಮುಕ್ತಿ ನೀಡುವ ಭಾಷೆ

ಕಷ್ಟ ಕಂಡ ಬದುಕಿಗೆ ಇಷ್ಟ ದೇವರ ದಯೆಯ
ದಾರಿ ತೋರಿಸಿ ಮುನ್ನಡೆಗೆ ಮುನ್ನುಡಿಯಾಗೋ ಭಾಷೆ
ಆತ್ಮನ ಕನ್ನಡಿ ಹಿಡಿದು ಭಾವಾಂತರಂಗದಿ ನಡೆವ ನಡೆಯ
ತಿಳಿಸಿ ಅರಿವ ಕಣ್ಣ ನೀಡುವ ಗುರುವು ನನ್ನ ತಾಯಿ ಭಾಷೆ

ಶನಿವಾರ, ಜನವರಿ 4, 2014

ನನ್ನವಳ ಒಂದು ಮುಂಜಾವು


ದಿನವೂ ನನಗಾಗಿ ಹಾಗೂ ನಮ್ಮ ಮನೆಗಾಗಿ ಅವಳ ಆಸರಿಕಿ, ಬ್ಯಾಸರಿಕಿ ಬಿಟ್ಟು ದುಡಿಯುವ ನನ್ನವಳ ಒಂದು ದಿನದ ಮುಂಜಾನೆಯನ್ನು ಕಂಡ ಮೇಲೆ ಬರೆದದ್ದು.

ನನ್ನವಳ ಒಂದು ಮುಂಜಾವು
-----------------------
ಮೂಡಣದ ಅಂಚಿನಲ್ಲಿ ಚಿತ್ತಾರ ಮೂಡಿಸುತ್ತ ಕೆಂಪನೆಯ 
ಬಣ್ಣದೋಕುಳಿಯಿಂದ ಆಗಸವನ್ನೆ ಬೆರಗುಗೊಳಿಸುವ ರವಿ ಮೂಡುವ ಮುನ್ನ,
ತನಗೆ ತನ್ನವರಿಗೆಂದೆ ಕೂಗುತ್ತ ತುತ್ತ ಅರಸುತ್ತ ಅತ್ತಿಂದಿತ್ತ ಸದ್ದು ಮಾಡುತ್ತ ಹಾರುತ್ತ 
ಸಾಗುವ ಹಕ್ಕಿಗಳ ಇಂಚರ ಕೇಳಿಸುವ ಮುನ್ನ,
ಆಕಾಶವಾಣಿಯ ಸದಾ ಸಂಪನ್ನ ಸುಪ್ರಭಾತದ ಸುಧೆಯ ಆರಂಭಕ್ಕೂ ಮುನ್ನ,
ನಿಧಾನದಿ ಎದ್ದು ಸೃಷ್ಟಿಯ ಅದ್ಭುತತೆಗೆ ತಲೆದೂಗಿ, ಹೊಸದಿನದ ಹರುಷದಲ್ಲಿ, 
ಮುಚ್ಚಿದ ಕಣ್ಣಲ್ಲಿ ಕೈಮುಗಿದು ಜೀವನದುದ್ದಕ್ಕೂ ಜೀವವಾಗಿ ಜೊತೆಯಲಿರುವ, 
ಸಾರವಿರುವ ನೌಕೆಯ ನಾವಿಕನ ಶಯನೋತ್ಸವದ ಪರಿ ಕಂಡು ಮುಗುಳ್ನಕ್ಕು, 
ಹಣೆಗೊಂದು ಮುತ್ತನೀಯಲು ನೆನಪಾಗುವವು ಸಾಲು ಸಾಲು ಕೆಲಸಗಳು....
ಬೆಳಗಿನ ನಿತ್ಯಕರ್ಮ ಮುಗಿದ ನಂತರ ಹಣೆಯ ಮೇಲೆ ಕುಂಕುಮ ರಾರಾಜಿಸಲು ಮುಂದಿನ ಆರಂಭಕ್ಕೆ ಸ್ಪೂರ್ತಿಯಾಗಿತ್ತು.
ಅಡಿಗೆ ಮನೆ, ಪಡಸಾಲೆ, ಮಲಗುವ ಕೊಣೆಗಳು ತಮ್ಮ ಪಾಲಿನ ಕಸಕೊಟ್ಟು ಕಳೆಯಿಂದ ಮಿನುಗುವಾಗಲೇ ಹೊರಗೆ ಧುಪ್ ಎಂದು ಸದ್ದಾಗಲು, ಹೊರಗೆ ಬಂದು ದಿನಪತ್ರಿಕೆಯ ಜಾಡಿಸಿ, ಒಮ್ಮೆ ಕಣ್ಣಾಡಿಸಿ, ಒಳಗಿನ ಮೇಜಿನ ಮೆಲಿಟ್ಟು, ಅಂಗಳಕ್ಕಂಟಿದ ಕೊಳೆಗೆ ಒಂದು ಟಾಟಾ ಹೇಳಿ, ನೀರಿನಿಂದ ಮೈ ತೊಳೆದು ರಂಗವಲ್ಲಿಯ ತೊಡಿಸಿ, ಬದಿಯ ಬಳ್ಳಿಯ ಎರಡು ಹೂಗಳ ಕಿತ್ತು  ಹೊಸ್ತಿಲದ  ಇಕ್ಕೆಲಗಳಲ್ಲಿ ಇರಿಸುತ್ತ ಮನೆಯ ಅಂಗಳಕ್ಕೆ ಸೊಬಗಕೊಟ್ಟು ತನ್ನ ಕಾಲ್ಗೆಜ್ಜೆಯ ಸದ್ದಿನಲ್ಲಿ ಮೋಡಿ ಮಾಡಿ ನಿಲ್ಲಿಸಿಬಿಟ್ಟಾಗ, ಆಗ ತಾನೆ ಏರುತ್ತ ಬರುತಿದ್ದ ಸೂರ್ಯನ ಹೊನ್ನ ಕಿರಣಗಳು ಸಾಕ್ಷಿಯಾಗಿದ್ದವು.




ಬುಧವಾರ, ಜನವರಿ 1, 2014

ನನ್ನ ಕವನಗಳು

ನನ್ನ ಕವನಗಳು
---------------

ಬೇಸರದಿ, ದುಃಖದಿ ಮನಸ್ಸು ಸೋತು ಗೆಲುವಿಲ್ಲದಾದಾಗ
ಆಸರೆಯಾಗುವವು ನನ್ನ ಕವನಗಳು
ಅನುಭವಗಳಿಂದ ರೂಪ ಪಡೆದು
ದಿವ್ಯ ಕಿರಣಗಳಾಗಿ ಸೋಕಿ
ನನ್ನ ಮೈಯ ನರ-ನಾಡಿಗಳಿಗೆಲ್ಲ
ಜೀವ ತುಂಬುವವು
ಮತ್ತೆ ಹೊಸ ರಕ್ತ ಹರಿದಾಡಿ ಹೊಸ ಜನುಮ ತಳೆದಂತಾದ ನಾನು
ಮರೆತು ಚಿಂತೆಗಳ ಮುಂದೆ ಸಾಗುವೆ
ಹೊಸ ಜೀವನವೆಂದು ಹೊಸ ಹರುಷದಲಿ

ನನ್ನೀ ಅಂತರಂಗದ ಅಂಗಳಕ್ಕೆ ಎಲ್ಲ ಸಹೃದಯಿಗಳಿಗೆ ಸ್ವಾಗತ !


ನನ್ನೀ ಅಂತರಂಗದ ಅಂಗಳಕ್ಕೆ ಎಲ್ಲ ಸಹೃದಯಿಗಳಿಗೆ ಸ್ವಾಗತ !

ಈ ನನ್ನ ತಾಣದಲ್ಲಿ ನಿಮ್ಮ ಯಾನಕ್ಕಾಗಿ ನನ್ನ ಜೀವದ ಕನ್ನಡ ಭಾಷೆಯಿಂದ, ಸರಳ ಸುಂದರ ಪದಗಳಿಂದ, ನನ್ನ ಮನಸ್ಸಿನ ಗುಡಿಯಿಂದ ಮೊಳಗುವ ಭಾವಗಳ ನಾದ-ನಿನಾದಗಳಿಂದ, ನನ್ನ ನೆನಪಿನ ತೋಟದಲ್ಲಿ ಸ್ವಂತ ಅನುಭವಗಳಿಂದ ಮಿಂದು ಅರಳಿದ ಹೂಗಳಿಂದ ಸಿಂಗರಿಸುವ ಒಂದು ಪುಟ್ಟ ಪ್ರಯತ್ನ ಇಲ್ಲಿದೆ. ಒಂದು ಬಾರಿ ಕಣ್ಣನೆಟ್ಟು, ಹೃದಯವನಿಟ್ಟು ಮುಂದೆ ಸಾಗಿ, ಈ ದಾರಿ ಹಿತ ನೀಡಬಹುದೆಂದು, ನಿಮ್ಮ ಮನಸ್ಸಿಗೆ ಹಿಡಿಸಬಹುದೆಂದು ನಂಬಿದ್ದೇನೆ. ಎಲ್ಲವೂ ನನ್ನ ಅನಿಸಿಕೆಗಳು, ನೀವು ಒಪ್ಪಲೂ ಬಹುದು, ಒಪ್ಪಿ ಅಪ್ಪಿಕೊಳ್ಳಲೂಬಹುದು, ಒಪ್ಪದೆ ಇರಬಹುದು, ಒಪ್ಪಿದರೂ, ಒಪ್ಪದಿದ್ದರೂ ತಪ್ಪದೆ ನಿಮ್ಮ ಭಾವನೆಗಳನ್ನ ಬರೆಯುವಿರಿ ಎಂಬ ವಿಶ್ವಾಸ ನನ್ನಲ್ಲಿದೆ.