ನಾ ನಿನ್ನಲ್ಲಿಗೆ ಬರುವೆನೆಂದೆ, ನೀ ನನ್ನ ಬರುವಿಕೆಗೆ ಹೂಂ ಎಂದೆ, ಅಳೆಯಲಾಗದ ಆಳದಲ್ಲಿ ಒಂದಿನಿತು ಅಳುಕಿಲ್ಲದ ಅತ್ಯುತ್ಸಾಹ ಒಮ್ಮೆಲೆ ಚಿಮ್ಮಿಸಿದ ಚೆಲುವುಗಳೆಲ್ಲ ಬರೆಯಿಸಿದವು ನೀ ನನ್ನ ಕಾವ್ಯಗಳಲ್ಲಿ ಕಂಡರೂ ಕಾಣದಂತೆ ಹುದುಗಿಕೊಂಡು ಮಾಡಿದ ಮೋಡಿಗಳನ್ನ. ನಿನ್ನನುರಾಗದಲ್ಲಿನ ಏರಲಾಗದ ಎತ್ತರಕೆ ಹಾರುವ ಇಚ್ಚಾ ಹಕ್ಕಿಯು ಹಳೆಯ ನೆನಪುಗಳ ಶಕ್ತಿಯಲಿ ತೆರೆದು ರೆಕ್ಕೆಗಳ ಸಾರುತಿದೆ ಹೊಸಾನುಭವದ ಆಗಸಕೆ ಮೈ ಒಡ್ಡಿ ತೇಲೋಣ ಬಾ ಎಂದು ಅಭಯ ನಿಶ್ಚಯಗಳಲ್ಲಿ.
ನಿನ್ನೆಡೆಗೆ ಬರುವ ಮುನ್ನ
=======================
ನಾ ನಿನ್ನಲ್ಲಿಗೆ ಬರುವ ಮುನ್ನ
ಇರುವ ದಾರಿಗಳೆಲ್ಲ ನಿನ್ನೆಡೆಗೆ
ಸಾಗಲಿ
ಇರುಳು ಕಂಡ ಕನಸುಗಳು ನನಸಾಗಲಿ
ರೋಮಾಂಚನಗಳ ಸೃಶ್ಟಿಸಿದ ಕವನಗಳು
ಹಾಡಲಿ
ಎಲ್ಲ ಮೇರೆಗಳ ದಾಟಿ ಹಕ್ಕಿ
ಹಾರುವಂತೆ
ಹೊಸ ಬಾನ ಮುಟ್ಟಿದ ಸಂತಸದಲಿ
ದೂರಗಳು ಸನಿಹತೆಯ ಸೊಬಗ ಧರಿಸಲಿ
ಹಳೆಯ ನೆನಪುಗಳೆಲ್ಲ
ಸಿಂಗರಿಸಿಕೊಂಡು ಸರದಿಯಲಿ ಕಾಯಲಿ
ನಿನ್ನ ನಿರಾಭರಣ ಚೆಲುವುಗಳೆಲ್ಲ
ಶೃಂಗಾರ ಗೆಲುವಿನಲಿ
ಮೆರೆದು ನವ್ಯತೆಗಳಾಗಮನಕೆ
ಸಜ್ಜಾಗಲಿ
ನಿರಂತರದಿ ನಿಂತು ನನ್ನ
ಕಾವ್ಯಗಳಲ್ಲಿ
ನೆಟ್ಟ ಪ್ರೇಮದ ದಿವ್ಯ
ದರುಶನದಲ್ಲಿ
-ಕವೆಂಪ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ಸಹೃದಯಿಗಳೇ, ನೆನಪಿಡಿ, ನಿಮ್ಮ ಅನಿಸಿಕೆ ನನ್ನ ಬರಹಗಳಲ್ಲಿನ ಕೊರತೆಗಳಿಗೊಂದು ಲಸಿಕೆ