ದಿನವೂ ನನಗಾಗಿ ಹಾಗೂ ನಮ್ಮ ಮನೆಗಾಗಿ ಅವಳ ಆಸರಿಕಿ, ಬ್ಯಾಸರಿಕಿ ಬಿಟ್ಟು ದುಡಿಯುವ ನನ್ನವಳ ಒಂದು ದಿನದ ಮುಂಜಾನೆಯನ್ನು ಕಂಡ ಮೇಲೆ ಬರೆದದ್ದು.
ನನ್ನವಳ ಒಂದು ಮುಂಜಾವು
-----------------------
ಮೂಡಣದ ಅಂಚಿನಲ್ಲಿ ಚಿತ್ತಾರ ಮೂಡಿಸುತ್ತ ಕೆಂಪನೆಯ
ಬಣ್ಣದೋಕುಳಿಯಿಂದ ಆಗಸವನ್ನೆ ಬೆರಗುಗೊಳಿಸುವ ರವಿ ಮೂಡುವ ಮುನ್ನ,
ತನಗೆ ತನ್ನವರಿಗೆಂದೆ ಕೂಗುತ್ತ ತುತ್ತ ಅರಸುತ್ತ ಅತ್ತಿಂದಿತ್ತ ಸದ್ದು ಮಾಡುತ್ತ ಹಾರುತ್ತ
ಸಾಗುವ ಹಕ್ಕಿಗಳ ಇಂಚರ ಕೇಳಿಸುವ ಮುನ್ನ,
ಆಕಾಶವಾಣಿಯ ಸದಾ ಸಂಪನ್ನ ಸುಪ್ರಭಾತದ ಸುಧೆಯ ಆರಂಭಕ್ಕೂ ಮುನ್ನ,
ನಿಧಾನದಿ ಎದ್ದು ಸೃಷ್ಟಿಯ ಅದ್ಭುತತೆಗೆ ತಲೆದೂಗಿ, ಹೊಸದಿನದ ಹರುಷದಲ್ಲಿ,
ಮುಚ್ಚಿದ ಕಣ್ಣಲ್ಲಿ ಕೈಮುಗಿದು ಜೀವನದುದ್ದಕ್ಕೂ ಜೀವವಾಗಿ ಜೊತೆಯಲಿರುವ,
ಸಾರವಿರುವ ನೌಕೆಯ ನಾವಿಕನ ಶಯನೋತ್ಸವದ ಪರಿ ಕಂಡು ಮುಗುಳ್ನಕ್ಕು,
ಹಣೆಗೊಂದು ಮುತ್ತನೀಯಲು ನೆನಪಾಗುವವು ಸಾಲು ಸಾಲು ಕೆಲಸಗಳು....
ಬೆಳಗಿನ ನಿತ್ಯಕರ್ಮ ಮುಗಿದ ನಂತರ ಹಣೆಯ ಮೇಲೆ ಕುಂಕುಮ ರಾರಾಜಿಸಲು ಮುಂದಿನ ಆರಂಭಕ್ಕೆ ಸ್ಪೂರ್ತಿಯಾಗಿತ್ತು.
ಅಡಿಗೆ ಮನೆ, ಪಡಸಾಲೆ, ಮಲಗುವ ಕೊಣೆಗಳು ತಮ್ಮ ಪಾಲಿನ ಕಸಕೊಟ್ಟು ಕಳೆಯಿಂದ ಮಿನುಗುವಾಗಲೇ ಹೊರಗೆ ಧುಪ್ ಎಂದು ಸದ್ದಾಗಲು, ಹೊರಗೆ ಬಂದು ದಿನಪತ್ರಿಕೆಯ ಜಾಡಿಸಿ, ಒಮ್ಮೆ ಕಣ್ಣಾಡಿಸಿ, ಒಳಗಿನ ಮೇಜಿನ ಮೆಲಿಟ್ಟು, ಅಂಗಳಕ್ಕಂಟಿದ ಕೊಳೆಗೆ ಒಂದು ಟಾಟಾ ಹೇಳಿ, ನೀರಿನಿಂದ ಮೈ ತೊಳೆದು ರಂಗವಲ್ಲಿಯ ತೊಡಿಸಿ, ಬದಿಯ ಬಳ್ಳಿಯ ಎರಡು ಹೂಗಳ ಕಿತ್ತು ಹೊಸ್ತಿಲದ ಇಕ್ಕೆಲಗಳಲ್ಲಿ ಇರಿಸುತ್ತ ಮನೆಯ ಅಂಗಳಕ್ಕೆ ಸೊಬಗಕೊಟ್ಟು ತನ್ನ ಕಾಲ್ಗೆಜ್ಜೆಯ ಸದ್ದಿನಲ್ಲಿ ಮೋಡಿ ಮಾಡಿ ನಿಲ್ಲಿಸಿಬಿಟ್ಟಾಗ, ಆಗ ತಾನೆ ಏರುತ್ತ ಬರುತಿದ್ದ ಸೂರ್ಯನ ಹೊನ್ನ ಕಿರಣಗಳು ಸಾಕ್ಷಿಯಾಗಿದ್ದವು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ಸಹೃದಯಿಗಳೇ, ನೆನಪಿಡಿ, ನಿಮ್ಮ ಅನಿಸಿಕೆ ನನ್ನ ಬರಹಗಳಲ್ಲಿನ ಕೊರತೆಗಳಿಗೊಂದು ಲಸಿಕೆ