ನಿನ್ನೆಯ ದಿನ ಕನ್ನಡಿಗನೆಂದೂ ಮರೆಯದ ರೀತಿಯಲ್ಲಿ ಬದುಕಲೊಂದು ಗೀತೆಯನ್ನ ಕೊಟ್ಟ ಡಿವಿಜಿ ಅವರ, ಹಾಗೆ "ಸಂಪ್ರದಾಯಗಳ ಜಡತೆಯನ್ನ ದಾಟಿ ಅಧುನಿಕ ಬುದ್ಧಿ ಪ್ರಚುರವಾದ ವೈಚಾರಿಕತೆಯನ್ನು ತಮ್ಮ ಸೃಜನಶೀಲತೆಯ ಸಂಗಾತಿಯನ್ನಾಗಿ ಮಾಡಿಕೊಂಡ (ಈ ಸಾಲುಗಳನ್ನು ಪುತಿನ ಸಮಗ್ರ ಕಾವ್ಯದಲ್ಲಿ ಜಿಎಸ್ಎಸ್ ರವರು ಬರೆದ ಎರಡು ಮಾತುಗಳಿಂದ ಆಯ್ದುಕೊಳ್ಳಲಾಗಿದೆ) ಕವಿ ಪುತಿನ ಅವರ ಜನ್ಮ ದಿನ. ಈ ವಿಶೇಷ ಸಂದರ್ಭದಲ್ಲಿ ಅವರಿಗಾಗಿಯೇ ನನ್ನದೇ ಆದ ರೀತಿಯಲ್ಲಿ ನನಗೆ ತಿಳಿದಷ್ಟನ್ನ ಬರೆದು ಈ ನನ್ನ ಕಾವ್ಯ ನಮನಗಳ ಮೂಲಕ ಅರ್ಪಿಸುತ್ತಿದ್ದೇನೆ.
ಡಿವಿಜಿಯವರಿಗೆ....
-------------------------------------
ಬೆಟ್ಟದಂತ ಪ್ರತಿಭೆಯಲ್ಲೂ ಹುಲ್ಲಾಗಿ
ಕಷ್ಟಗಳಲಿ ಕಲ್ಲಾಗಿ, ಮನೆಗೆ ಮಲ್ಲಿಗೆಯಾಗಿ
ಗಟ್ಟಿ ಕಾವ್ಯ ಸೃಷ್ಟಿ ಮಾಡಿದರು
ಅಕ್ಕಿಯಲ್ಲಿ ಅನ್ನವನು, ಅಕ್ಷರದಲ್ಲಿ ಬರಹವನ್ನು
ಮೊದಲು ಕಂಡವರು ಯಾರೋ ?
ನಾವು ಕಂಡಂತೆ ಕನ್ನಡದಲ್ಲಿ ಭಗವದ್ಗೀತೆಯನ್ನ
ನಮಗಾಗೆ ಮೊದಲು ನೀಡಿದವರಿವರು
ನಗಲು, ನಗಿಸಲು ಹೇಳಿ
ನಗುವ ಕೇಳುತ ನಗುವುದು ಅತಿಶಯವೆಂದು
ನಗುತ ಬಾಳುವ ವರವ ಪಡೆದರಿವರು
ಭುವಿಯ ಓಟದಲ್ಲಿ ಭವ ರೋಗಿಯಾಗದೆ
ವಿಧಿವಶನಾಗಿ ಬದುಕಿದರು
ಹಾಡು ಮಾಡಿದವರಿಗೆ....
-------------------------------------
ಮೈ ಮನಗಳ ಮಿಡಿವ ಹಾಡ ಮಾಡಿ
ಹಾಡು ಹಾಡಿದವರದೆಂದು ಸಾರಿದ ಪರಿಗೆ
ಹಾಡ ಹಾಡಿದವರೆಲ್ಲ ಈಗ ಹಾಡು ಕೇಳುವವರದೆನ್ನಲು
ನಿಜದಿ ಹಾಡು ಯಾರದು ?
ಮೈ ಮುಪ್ಪ ದೂಡಿ ಮನದ ಚಿಂತೆ ಓಡಿ
ಬಾಳು ಸನಿಹ, ಸಾವು ದೂರವಾಗುವ ನಂಬಿಕೆ ಕೊಡುವ
ಗೋವಿಂದನೂದುವ ಕೊಳಲ ಹಾಡು ಕೇಳಿದವರು
ಹಾಡು ಭಾವಸಾರವ ಹೀರಿದೆದೆಯವರದು ಎನ್ನಲು
ನಿಜದಿ ಹಾಡು ಯಾರದು ?
ಮೈ ಮನಗಳ ಶಿಸ್ತಿನಿಂದ
ನಡೆ ನುಡಿಯಲ್ಲಿ ಕೇಡೆಣಿಸದೆ ಹಂಗಿಲ್ಲದೆ
ಹಾಡುಗಳಲ್ಲೆ ಬದುಕಿ ಇಹ-ಪರಕೆ ಇಷ್ಟು
ಸಾಕೆಂದು ಬಯಸಿದವರಿಗೆ ಅರ್ಪಿತವಾದ ಈ ಹಾಡು ಕೇಳಿದೆ.
ನಿಜದಿ ಹಾಡು ಯಾರದೆಂದು ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ಸಹೃದಯಿಗಳೇ, ನೆನಪಿಡಿ, ನಿಮ್ಮ ಅನಿಸಿಕೆ ನನ್ನ ಬರಹಗಳಲ್ಲಿನ ಕೊರತೆಗಳಿಗೊಂದು ಲಸಿಕೆ