ನೀ ನನ್ನ ಭೇಟಿಯಾಗಲಿಲ್ಲ ಎಂದು ಹುಸಿ ಮುನಿಸಿನಿಂದ ಮಾತನಾಡದೆ ಸುಮ್ಮನಿದ್ದೆ ಹಲವು ದಿನ, ವಾರ, ತಿಂಗಳುಗಳು. ತಡೆಯಲಾಗಲಿಲ್ಲ ನೆನಪುಗಳು ಬಗ್ಗಿಸಿದಾಗ ನನ್ನ, ಒಲವು ಮುರಿದಾಗ ಮೌನ, ಮಾತನಾಡಿದೆ ಎಲ್ಲ ಮರೆತು. ಮಾತನಾಡುವಾಗ ನೀ ಮೊದಲು ಕೆಳಿದ್ದು - "ನೆನಪಿದ್ದೀನಾ ನಾನು ?" ಎಂದು. ನಾನೆಂದೆ "ನನ್ನ ಕ್ಷಣ ಕ್ಷಣಗಳಲ್ಲಿ ನೀನಿದ್ದಿಯ, ಮರೆಯುವದಾದರೂ ಹೇಗೆಂದು ?", ಮನಸೊಳಗೆ ಅಂದುಕೊಂಡದ್ದು "ನಾ ಸತ್ತರೂ ನಿನ್ನ ನೆನಪು ನನ್ನಲ್ಲಿ ಸಾಯುವುದಿಲ್ಲ, ಯಾಕೆಂದರೆ ನಿನ್ನನ್ನಾಗಲೇ ಇಲ್ಲಿ ಚಿತ್ರಿಸಿದ್ದೀನಿ, ಆ ಚಿತ್ರಗಳು ಅಮರತ್ವ ರಸವ ಹೀರಿ ನಗುತಿಹವು ಇಲ್ಲಿ ಕವಿತೆಗಳಾಗಿ" ಎಂದು. ನಿನ್ನೊಡನೆ ಮಾತನಾಡಿದ ಘಳಿಗೆಯಿಂದಲೇ, ತಡೆಯದ ಒಳ ಹರಿವು, ನೋವಿರದ ಒಳ ಸುಳಿಗಳ ತುಂಬಿಕೊಂಡು ದುಮ್ಮಿಕ್ಕಿ ಹರಿಯುತ್ತ ನದಿಗಳಾಗಿ ನಿನ್ನ ಮನವೆಂಬ ಕಡಲ ಸೇರಲು ಹಾತೊರೆಯುತ್ತ, ನೀ ನೇರವಾಗಿ ಹೇಳದೇ ಹೋದರೂ, ನಿನ್ನ ಪ್ರೇಮದ ಮಡಿಲಿಗೆ ನನ್ನ ಕರೆದಂತೆ ಅನ್ನಿಸುತ್ತಲೇ, ಈ ಪ್ರೆಮದ ಅಲೆಗಳೆಬ್ಬಿಸಿದ ದಾಂಧಲೆಗಳನ್ನ ಕಟ್ಟಿ ಹಾಕಿರುವೆ ಈ ಕೆಳಗಿನ ಸಾಲುಗಳಲ್ಲಿ.....
ತುಂಬ ದಿನದ ಮೇಲೆ ನಿನ್ನೊಡನೆ ಮಾತು...
------------------------------------------------
ತುಂಬ ದಿನದ ಮೇಲೆ ನಿನ್ನೊಡನೆ ಮಾತು
ಗಿರಿಶೃಂಗಗಳಲ್ಲಿ ಸ್ಯುಯೆಂದು ಬೀಸಿ ಬರುವ ತಂಪಿನ ಗಾಳಿ ತರುವ ಸಂಗೀತದಲೆಗಳ ನೆನಪಿಸಿತ್ತು
ಕಣ್ಮುಚ್ಚಿದರೂ, ತೆರೆದರೂ ಅವಿರತವಾಗಿ
ನಿನ್ನ ಕೈ ಹಿಡಿದುಕೊಂಡು ನನ್ನೆದೆಗೆ ಒತ್ತಿಕೊಂಡ
ಚಿತ್ರಗಳನ್ನ ನನ್ನೊಡಲಿಗೆ ಸೇರಿಸಿತ್ತು
ದಿನವೂ ದುಮ್ಮಿಕ್ಕಿ ಎಲ್ಲ ಅಡೆ-ತಡೆಗಳ ಸೀಳಿ
ಸಾವಿರ ನದಿಗಳಾಗಿ ಹರಿಯುತಿತ್ತು
ನಿನ್ನ ಮನದ ಕಡಲ ಸೇರಲು
ಅಲೆ ಅಲೆಗಳಲ್ಲಿ ಇಂಪು ತಂದು ಮಧುರವಾಗಿ ಕರೆದಂತಿತ್ತು
ಸೋತ ವೀರನಿಗೆ ಮತ್ತೆ ಗೆಲ್ಲುವ ದಿವ್ಯಾಮೃತವೀಯುವ ಶಕ್ತಿ ಪಡೆದ
ನನಗಾಗಿ ತೆರೆದ ನಿನ್ನ ಪ್ರೇಮದ ಮಡಿಲು
ನಿನ್ನ ಏಕಾಂತಗಳಲ್ಲಿ ಜೊತೆಯಾಗಲು
-ಕವೆಂಪ