ಪ್ರತಿ
ರಾತ್ರಿಯೂ ನಿದಿರೆ ನನ್ನ ಚುಂಬಿಸಿ ಆಲಂಗಿಸುವ ಮುನ್ನ ನಿನಗೆ ಮನದಲ್ಲಿ ಶುಭವ ಕೋರಿ ಕಂಗಳ ಸಂದಿಗಳ
ಬಿಗಿಯುವೆ ನಿನ್ನ ಚಿತ್ರಗಳಿಂದ, ಚೈತ್ರ ಕಾಲದ ರಾತ್ರಿಗಳಲ್ಲಿ ಹೊರಗೆ ಬೀಸುವ ಗಾಳಿ
ನಿಧಾನದಿ ಎಲೆಗಳ ಸವರಿ ನಲಿಯುವ ಪರಿಯಿಂದ ಪ್ರೇರಣೆಗೊಂಡು ಪ್ರಕಟಿಸುತ್ತಿರುವೆ ನನ್ನೀ
ಭಾವನೆಗಳನ್ನ ...ನಿನ್ಮುಂದೆ ಹೇಳಲಾಗದೇ ಹೋದದ್ದೆ ಕಾರಣವಾಯಿತು ಇದರ ಉಗಮಕ್ಕೆ. ನೀನು ನಿನ್ನ
ನೆಮ್ಮದಿಯ ನಿದಿರೆಗೆ ಜಾರುವ ಮುನ್ನ ಒಮ್ಮೆ ಕೇಳಿಸಿತೆ ಈ ಹಾಡು ಗೆಳತಿ ? "ಶುಭ
ರಾತ್ರಿ ನಿನಗೆ"
ಶುಭ ರಾತ್ರಿ ನಿನಗೆ......ಒಲವಿನಿಂದ
--------------------------------------
ನನ್ನಾಸೆಯ ಹೂವ ಚೆಲ್ಲಿದ ಬೆಳದಿಂಗಳ ಮಂಚದಲಿ
ತೆಳು ನಡುವಿನ ಮೈ ಚಾಚಿ ಮಲಗು ಮೆಲ್ಲಗೆ ಚೆಲುವ ಹರಿಸುತ್ತ
ಸುತ್ತಲೂ ಹರಡಿ ಮೆರೆಯಲಿ ನಿನ್ನ ಸೊಬಗು ಪರಿಮಳದಲಿ
ಬಳಲಿಕೆಗಳೆಲ್ಲ ಕರಗಿ ಮಂದಹಾಸಗಳು ಮಿನುಗಲಿ ಸಣ್ಣ ಬೆಳಕಿನ ಹೊನಲಿನಲಿ
ನಿನಗಾಗಿಯೇ ನಾ ಗುನುಗುವ ಪ್ರೇಮಗೀತೆಗಳು ಜೋಗುಳವ ಹಾಡುತ್ತ
ಮೆಲುದನಿಯಲಿ ತೇಲಿ ಬಂದು ನಿನ್ನುಸಿರ ಚುಂಬಿಸಲಿ
ಸವಿಕನಸುಗಳ ತುಂತುರು ಮಳೆಹನಿಗಳಿಗೆ ತೋಯ್ದು ತೇವದಲಿ
ನಡುಗುತ್ತ ಕಳೆದ ದಾರಿಗಳಲಿ ನೆನಪುಗಳು ನನ್ನ ಸಹವಾಸಗಳ ಹುಡುಕುತ್ತ
ತುಸು ದೂರ ಸಾಗಿ ಬಯಸಿದಾಸರೆ ಸಿಕ್ಕು ಕುಣಿಯಲಿ ಹಿಗ್ಗಿನಲಿ
ಸುಖದ ಸೋಪಾನ ಪ್ರಣಯ ಝೇಂಕಾರ ಮಧುರ ಭಾವಯಾನದಲಿ
ಮತ್ತೇರಿ ಸುರತದಲಿ ಸೋತ ಮನಸು ಹಗುರವಾಗುತ್ತ
ನಿಶೆ ನಾಚುವಂತೆ ಸಾವಿಲ್ಲದ ಸಂಪ್ರೀತಿ ಹೊದ್ದು ಮೊಗದಲ್ಲಿ ನೀ ಮಲಗು ನೆಮ್ಮದಿಯ ನಿದಿರೆಯಲಿ
-ಕವೆಂಪ
ಸಹೃದಯಿಗಳ ಸಹಾಯಕ್ಕೆ ವಿಶೇಷ ಶಬ್ಧ-ಅರ್ಥಗಳು:
----------------------------------------------------
ಸೋಪಾನ = ಮೆಟ್ಟಿಲುಗಳು; ಝೇಂಕಾರ = ಧ್ವನಿ, ಮೊರೆತ ; ಸುರತದಲಿ = ಮಿಲನದಲಿ; ನಿಶೆ = ರಾತ್ರಿ; ಸಂಪ್ರೀತಿ = ಅತಿಶಯವಾದ ಪ್ರೀತಿ