ಗೋವಿಂದನ ಗವಿ ಸೇರಿದ ಗತ್ತಿನ ಗಣಿ - ಗೋವಿಂದಪ್ಪ ದೊಡ್ಡಪ್ಪ
=====================================
*****ಸಹೃದಯಿಗಳಿಗಾಗಿ ಮಾತ್ರ ******
----ಪೂರ್ತಿ ಓದಲು ಕೊಡಬೇಕಾದ ನಿಮ್ಮ ಅಮೂಲ್ಯ ಸಮಯ - ೧೦ ನಿಮಿಷಗಳು ಮಾತ್ರ ----
ಗೋವಿಂದಪ್ಪ ಅವರು ನಮ್ಮ ಬಡಾವಣೆಯ ದಂಡನಾಯಕರೇ ಎಂದು ಹೇಳಬಹುದು. ಅವರು ಶುಕ್ರವಾರ, ೨೧.೫.೨೦೨೧ ರ ಸಂಜೆ ನಮ್ಮನಗಲಿದ್ದಾರೆ, ಅವರಿಗಾಗಿಯೇ ಈ ಬರಹವನ್ನು ಅರ್ಪಿಸುತ್ತಿದ್ದೇನೆ. ಅವರ ಒಡನಾಡಿಯಾಗಿ ಕಾಡಿದ ಕ್ಷಣಗಳನ್ನು ನಾ ಕಂಡಂತೆ ನನ್ನ ನೆನಪಿನಾಳದಲ್ಲಿ ಹುದುಗಿದ್ದ ಪ್ರತಿ ಘಟನೆಗಳಲ್ಲಿ ಆಯ್ದ ಕೆಲವನ್ನು ಹೆಕ್ಕಿ ಇಲ್ಲಿ ದಾಖಲಿಸಿದ್ದೇನೆ, ಎಲ್ಲವು ಅಕ್ಷರಶ: ಸತ್ಯ, ಘಟನೆಗಳು ಕ್ರಮವಾಗಿ ಇರದಿರಬಹುದು, ಘಟಿಸಿದ ವರುಷ ಇತ್ಯಾದಿಗಳು ಹೆಚ್ಚು ಕಮ್ಮಿ ಇರಬಹುದು ಅಷ್ಟೇ.
ಈ ಬರಹಕ್ಕೆ ಬೇಕಾದ ಭೌಗೋಳಿಕ ಮಾಹಿತಿ :
ಬೆಂಗಳೂರಿನ ಉತ್ತರ ಭಾಗದ ಬ್ಯಾಟರಾಯನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುವ ಕೊಡಿಗೇಹಳ್ಳಿ ಗ್ರಾಮದ ಒಂದು ಚಿಕ್ಕ ಬಡಾವಣೆ ಡೀ ಏನ್ ಕ್ಲೇವ್, ಇದು ನಿರ್ಮಾಣ ವಾಗಿದ್ದು ೧೯೯೮- ೨೦೦೦ ರ ನಡುವೆ. ಇಲ್ಲಿ ಸುಮಾರು ೧೦೦ಕ್ಕೂ ಅಧಿಕ ಮನೆಗಳಿವೆ, ಒಟ್ಟು ಐದು ಅಡ್ಡ ರಸ್ತೆಗಳಿರುವ ಈ ಬಡಾವಣೆ ಹೆಬ್ಬಾಳ ಎಸ್ಟೀಮ್ ಮಾಲ್ ನಿಲ್ದಾಣಗಳ ದಾಟಿದ ಮೇಲೆ ಸಿಗುವ ಬಸ್ ನಿಲ್ದಾಣ ಕೊಡಿಗೇಹಳ್ಳಿ ಗೇಟ್, ಅಲ್ಲಿಂದ ಎಡಕ್ಕೆ ತಿರುಗಿ ತಿಂಡ್ಲುವಿಗೆ ಹೋಗುವ ದಾರಿಯಲ್ಲಿ ೧ ಕಿಮಿ ದೂರ ಸಾಗಿದರೆ ಬಲಕ್ಕೆ ಕೊತಿಹೊಸಹಳ್ಳಿ ಮಾದರಿ ಪ್ರಾಥಮಿಕ ಶಾಲೆ ಸಿಗುತ್ತೆ, ನಂತರ ಅನತಿ ದೂರದಲ್ಲಿ ಎಡಕ್ಕೆ ತಿರುಗಿದರೆ ಸಿಗುವ, ಜನಜಂಗುಳಿ, ಸಂಚಾರ ದಟ್ಟಣೆಯ ಸುಳಿವಿಲ್ಲದ ರಸ್ತೆಯ ಇಕ್ಕೆಲಗಳಲ್ಲಿ ಹಚ್ಚ ಹಸಿರಿನ ಗಿಡ ಮರಗಳನ್ನೊಳಗೊಂಡ ಸುಂದರ ಪುಟ್ಟ ಪ್ರಶಾಂತ ವಾತಾವರಣ ಹೊಂದಿದ, ವಾಸಕ್ಕೆ ಯೋಗ್ಯ ವಾದ ಬಡಾವಣೆ ಇದು. ಹಾಗೆ ಮುಂದೆ ಸಾಗಿದರೆ ಆಮ್ಕೊ ಬಡಾವಣೆ ಹಾಗೆ ಕೆಳಗೆ ಸಾಗಿದರೆ ಇಂಪ್ಯಾಕ್ಟ್ ಕಾಲೇಜು ನಂತರ ಬದ್ರಪ್ಪ ಬಡಾವಣೆ ನಂತರ ಹೊರ ವರ್ತುಲ ರಸ್ತೆಗೆ ಹೋಗಿ ಸೇರುವುದು.
ಈ ದಿನ ಶನಿವಾರ ೨೨.೫.೨೦೨೧ ಬೆಳಗಿನ ಜಾವ ಮೂರುವರೆಗೆ ಎಚ್ಚರ ಆಗಿತ್ತು, ನಂತರ ನಿದ್ದೆ ಬರಲೇ ಇಲ್ಲ, ಆಕಡೆ ಈಕಡೆ ಮಾಡಿದೆ ಉಪಯೋಗವಾಗಲಿಲ್ಲ. ತಲೆಯಲ್ಲಿ ಸುರುಳಿ ಸುರುಳಿಯಾಗಿ ಗತಿಸಿದ ದಿನಗಳು ಒಂದರೆ ಹಿಂದೆ ಇನ್ನೊಂದು ಬರುತ್ತಲೇ ಇದ್ದವು, ಅವೆಲ್ಲ ಕೇವಲ ನನ್ನ ಹಾಗೂ ಒಬ್ಬ ವ್ಯಕ್ತಿಯ ನಡುವೆ ನಡೆದ ಘಟನೆಗಳಾಗಿದ್ದವು. ಸುಮಾರು ೨೦ ವರ್ಷದ ಕೆಳಗೆ ನಡೆದ ಘಟನೆಗಳ ಚಿತ್ರ ತೇಲಿ ಬಂತು........
=====================================
*****ಸಹೃದಯಿಗಳಿಗಾಗಿ ಮಾತ್ರ ******
----ಪೂರ್ತಿ ಓದಲು ಕೊಡಬೇಕಾದ ನಿಮ್ಮ ಅಮೂಲ್ಯ ಸಮಯ - ೧೦ ನಿಮಿಷಗಳು ಮಾತ್ರ ----
ಗೋವಿಂದಪ್ಪ ಅವರು ನಮ್ಮ ಬಡಾವಣೆಯ ದಂಡನಾಯಕರೇ ಎಂದು ಹೇಳಬಹುದು. ಅವರು ಶುಕ್ರವಾರ, ೨೧.೫.೨೦೨೧ ರ ಸಂಜೆ ನಮ್ಮನಗಲಿದ್ದಾರೆ, ಅವರಿಗಾಗಿಯೇ ಈ ಬರಹವನ್ನು ಅರ್ಪಿಸುತ್ತಿದ್ದೇನೆ. ಅವರ ಒಡನಾಡಿಯಾಗಿ ಕಾಡಿದ ಕ್ಷಣಗಳನ್ನು ನಾ ಕಂಡಂತೆ ನನ್ನ ನೆನಪಿನಾಳದಲ್ಲಿ ಹುದುಗಿದ್ದ ಪ್ರತಿ ಘಟನೆಗಳಲ್ಲಿ ಆಯ್ದ ಕೆಲವನ್ನು ಹೆಕ್ಕಿ ಇಲ್ಲಿ ದಾಖಲಿಸಿದ್ದೇನೆ, ಎಲ್ಲವು ಅಕ್ಷರಶ: ಸತ್ಯ, ಘಟನೆಗಳು ಕ್ರಮವಾಗಿ ಇರದಿರಬಹುದು, ಘಟಿಸಿದ ವರುಷ ಇತ್ಯಾದಿಗಳು ಹೆಚ್ಚು ಕಮ್ಮಿ ಇರಬಹುದು ಅಷ್ಟೇ.
ಈ ಬರಹಕ್ಕೆ ಬೇಕಾದ ಭೌಗೋಳಿಕ ಮಾಹಿತಿ :
ಬೆಂಗಳೂರಿನ ಉತ್ತರ ಭಾಗದ ಬ್ಯಾಟರಾಯನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುವ ಕೊಡಿಗೇಹಳ್ಳಿ ಗ್ರಾಮದ ಒಂದು ಚಿಕ್ಕ ಬಡಾವಣೆ ಡೀ ಏನ್ ಕ್ಲೇವ್, ಇದು ನಿರ್ಮಾಣ ವಾಗಿದ್ದು ೧೯೯೮- ೨೦೦೦ ರ ನಡುವೆ. ಇಲ್ಲಿ ಸುಮಾರು ೧೦೦ಕ್ಕೂ ಅಧಿಕ ಮನೆಗಳಿವೆ, ಒಟ್ಟು ಐದು ಅಡ್ಡ ರಸ್ತೆಗಳಿರುವ ಈ ಬಡಾವಣೆ ಹೆಬ್ಬಾಳ ಎಸ್ಟೀಮ್ ಮಾಲ್ ನಿಲ್ದಾಣಗಳ ದಾಟಿದ ಮೇಲೆ ಸಿಗುವ ಬಸ್ ನಿಲ್ದಾಣ ಕೊಡಿಗೇಹಳ್ಳಿ ಗೇಟ್, ಅಲ್ಲಿಂದ ಎಡಕ್ಕೆ ತಿರುಗಿ ತಿಂಡ್ಲುವಿಗೆ ಹೋಗುವ ದಾರಿಯಲ್ಲಿ ೧ ಕಿಮಿ ದೂರ ಸಾಗಿದರೆ ಬಲಕ್ಕೆ ಕೊತಿಹೊಸಹಳ್ಳಿ ಮಾದರಿ ಪ್ರಾಥಮಿಕ ಶಾಲೆ ಸಿಗುತ್ತೆ, ನಂತರ ಅನತಿ ದೂರದಲ್ಲಿ ಎಡಕ್ಕೆ ತಿರುಗಿದರೆ ಸಿಗುವ, ಜನಜಂಗುಳಿ, ಸಂಚಾರ ದಟ್ಟಣೆಯ ಸುಳಿವಿಲ್ಲದ ರಸ್ತೆಯ ಇಕ್ಕೆಲಗಳಲ್ಲಿ ಹಚ್ಚ ಹಸಿರಿನ ಗಿಡ ಮರಗಳನ್ನೊಳಗೊಂಡ ಸುಂದರ ಪುಟ್ಟ ಪ್ರಶಾಂತ ವಾತಾವರಣ ಹೊಂದಿದ, ವಾಸಕ್ಕೆ ಯೋಗ್ಯ ವಾದ ಬಡಾವಣೆ ಇದು. ಹಾಗೆ ಮುಂದೆ ಸಾಗಿದರೆ ಆಮ್ಕೊ ಬಡಾವಣೆ ಹಾಗೆ ಕೆಳಗೆ ಸಾಗಿದರೆ ಇಂಪ್ಯಾಕ್ಟ್ ಕಾಲೇಜು ನಂತರ ಬದ್ರಪ್ಪ ಬಡಾವಣೆ ನಂತರ ಹೊರ ವರ್ತುಲ ರಸ್ತೆಗೆ ಹೋಗಿ ಸೇರುವುದು.
ಈ ದಿನ ಶನಿವಾರ ೨೨.೫.೨೦೨೧ ಬೆಳಗಿನ ಜಾವ ಮೂರುವರೆಗೆ ಎಚ್ಚರ ಆಗಿತ್ತು, ನಂತರ ನಿದ್ದೆ ಬರಲೇ ಇಲ್ಲ, ಆಕಡೆ ಈಕಡೆ ಮಾಡಿದೆ ಉಪಯೋಗವಾಗಲಿಲ್ಲ. ತಲೆಯಲ್ಲಿ ಸುರುಳಿ ಸುರುಳಿಯಾಗಿ ಗತಿಸಿದ ದಿನಗಳು ಒಂದರೆ ಹಿಂದೆ ಇನ್ನೊಂದು ಬರುತ್ತಲೇ ಇದ್ದವು, ಅವೆಲ್ಲ ಕೇವಲ ನನ್ನ ಹಾಗೂ ಒಬ್ಬ ವ್ಯಕ್ತಿಯ ನಡುವೆ ನಡೆದ ಘಟನೆಗಳಾಗಿದ್ದವು. ಸುಮಾರು ೨೦ ವರ್ಷದ ಕೆಳಗೆ ನಡೆದ ಘಟನೆಗಳ ಚಿತ್ರ ತೇಲಿ ಬಂತು........
ನಾನು ಮಧ್ಯಾಹ್ನ ಊಟ ಮುಗಿಸಿ ಹಾಗೆ ಮನೆಯಿಂದ ಹೊರಗೆ ದಾರಿಯಲ್ಲಿ ಹೋಗುತ್ತಿರಲು ಕಾರೊಂದು ಬಂದು ನಿಂತಿತು ಅದರಿಂದ ಕೆಳಗೆ ಇಳಿದ ಅಜಾನುಬಾವು ವ್ಯಕ್ತಿ ಉದ್ದನೆಯ ಕೈಯ ಶುಭ್ರ ಬಿಳಿ ಮತ್ತು ತಿಳಿ ಗುಲಾಬಿ ಅಂಗಿ ಮತ್ತು ಕಂದು ಬಣ್ಣದ (ಇರಬಹದು, ಸರಿಯಾಗಿ ನೆನಪಿಲ್ಲ) ಪ್ಯಾಂಟನ್ನು ತೊಟ್ಟು ಒಂದು ಗತ್ತಿನಲ್ಲಿ "ಏಯ್ ಬನ್ರೀ ಪ್ಪಾ ಇಲ್ಲಿ..." ಎಂದು ಕಂಚಿನ ಕಂಠದಲ್ಲಿ ಕರೆಯಿತು, ನೋಡಿದಾಗ ೬೦ ರ ಆಸು ಪಾಸಿನ ವ್ಯಕ್ತಿ, ತತ್ಕ್ಷಣ ಯಾಕೋ ಏನೋ ನನ್ನಲ್ಲಿ ಗೋವಿಂದನ ನೆನಪಾಗಿತ್ತು. ಕಪ್ಪಗೆ ಕಂಡರೂ ಆ ಗಾಂಭೀರ್ಯ, ಕಡಖ್ ಮಾತು, ಕಣ್ಣುಗಳ ತೇಜಸ್ಸಿನ ನಡುವೆ ಎದ್ದು ತೋರುವ ಮೂಗು ಮುಖಕ್ಕೆ ಹೊಳಪನ್ನು ಚೆಲ್ಲಿತ್ತು. ಯಾರೋ ಏನೋ ?... ವ್ಯಕ್ತಿ ಎತ್ತರ, ದಪ್ಪ ವಾಗಿದ್ದು ಕಂಡಾಗ, ಚೆನ್ನಾಗಿ ಮುದ್ದೆ ಮತ್ತು ಸೊಪ್ಪು ಸಾರು ತಿಂದು, ಹಾಲು ಕುಡಿದು ಬೆಳೆದ ಗಟ್ಟಿ ಆಳು ಇದು ಎಂದು ಮನದಲ್ಲೇ ಅಂದುಕೊಂಡು "ಹೇಳಿ ...?" ಎಂದೇ. ಒಂದು ಬಿಳಿ ಹಾಳೆಯಲ್ಲಿನ ನಕ್ಷೆಯನ್ನ ಹಿಡಿದು, ನಮ್ಮ ಬಡಾವಣೆಗೆ ಹೊಂದಿಕೊಂಡ ರಸ್ತೆಯನ್ನು ನಕ್ಷೆಯಲ್ಲಿ ತೋರಿಸುತ್ತ "ಈ ರಸ್ತೆ ಎಲ್ಲಿ ಬರುತ್ತೆ ..?" ಎಂದು ಕೇಳಿತು ಆ ವ್ಯಕ್ತಿ (ನಿವೇಶನ ನೋಡಲು ಬಂದಾಗ). ನಾನು ಕೈ ಸನ್ನೆ ಮಾಡುತ್ತಾ "ಈ ಕಡೆ ಸಾಗಿ.." ಎಂದಷ್ಟೇ ಹೇಳಿದ ನೆನಪು. ಗಾಡಿ ಗಾಳಿಯನ್ನ ಹಿಂದೆ ತಳ್ಳಿ ಮುಂದೆ ಸಾಗಿದ್ದು ನನ್ನ ಜೀವನದ ಪಯಣದಲ್ಲಿ ಒಬ್ಬ ಹೊಸ ಹಿರಿಯ ಸಹ ಪಯಣಿಗ ಸ್ನೇಹಿತನನ್ನ ಕೊಟ್ಟಿತ್ತು. ಆ ವ್ಯಕ್ತಿ ನಿನ್ನೆ ತನ್ನ ಪಯಣ ಮುಗಿಸಿ ಹೊರಟಿದ್ದಾನೆ... ಗಾಡಿಯಿಂದ ಇಳಿದು ಮಾತನಾಡಿದ ವ್ಯಕ್ತಿ ಬೇರೆ ಯಾರೂ ಅಲ್ಲ ಅವರೇ ನಿನ್ನೆ ನಮ್ಮನಗಲಿ ಗೋವಿಂದನ ಪಾದ ಸೇರಿದ ಗೋವಿಂದಪ್ಪ ದೊಡ್ಡಪ್ಪ !
ಆಪ್ತರಾದ ಅವರನ್ನು ಪ್ರೀತಿಯಿಂದ ನಾನು ತಂದೆ ಸಮಾನರು, ನಮ್ಮ ತಂದೆಗೂ ಹಿರಿಯರು ಎಂದು ದೊಡ್ಡಪ್ಪ ಎಂದು ಕರೆಯುತ್ತಿದ್ದೆ. ಬಹಳಷ್ಟು ಜನ ಸರ್ ಅಥವಾ ಅಂಕಲ್ ಎಂದು ಕರೆದಂತೆ ನಾನು ಎಂದೂ ಅವರನ್ನ ಹಾಗೆ ಕರೆಯಲಿಲ್ಲ, ನಮ್ಮ ಬಡಾವಣೆಯಲ್ಲಿ ಕೆಲವೇ ಕೆಲವು ಜನ ಹಿರಿಯರನ್ನು ಈ ರೀತಿ ಕರೆಯುತ್ತಿದ್ದೆ. ಇದು ಜನ್ಮ ಭೂಮಿ ಕನ್ನಡ ನೆಲವು ನಂಗೆ ನೀಡಿದ ಸಂಸ್ಕೃತಿಯಲ್ಲಿನ ಒಂದು ಗುಣವೆಂದು ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ.
ಇದಾದ ಸುಮಾರು ತಿಂಗಳುಗಳ ನಂತರ (೨೦೦೩ ಇರಬಹುದು) ಐದನೇ ಅಡ್ಡ ರಸ್ತೆಯಲ್ಲಿ ತಮ್ಮ ಮನೆಯನ್ನು ಕಟ್ಟಿ ಕೊಂಡು ವಾಸಕ್ಕೆ ಬರುವ ತನಕ ಅವರ ಪೂರ್ಣ ಪರಿಚಯ ಆಗಿರಲಿಲ್ಲ. ಅವರು ಮನೆಯನ್ನು ಕಟ್ಟುವಾಗ ತಾವೇ ಖುದ್ದಾಗಿ ನಿಂತು ಮನೆಯ ನೀಲಿ ನಕ್ಷೆ ಯ ಜೊತೆ ಕಟ್ಟಡ ಕ್ಕೆ ಬೇಕಾಗುವ ಎಲ್ಲ ಸಾಮಾಗ್ರಿ ಪಟ್ಟಿ, ಅದು ಸಿಗುವ ಸ್ಥಳ, ಬೆಲೆ ಎಲ್ಲ ತಯಾರಿಯನ್ನು ಮಾಡಿಕೊಂಡು ಇಟ್ಟುಕೊಳ್ಳುತ್ತಿದ್ದರು. ಮನೆ ಮುಗಿಯಲಿಕ್ಕೆ ಬಂದಾಗ ಒಮ್ಮೆ ಹೋಗಿದ್ದೆ, ಆಗ ಅವರು ಮನೆ ಕಟ್ಟುವಾಗ ಗುಣಮಟ್ಟದಲ್ಲಿ ರಾಜಿ ಆಗದೆ ವೆಚ್ಚ ಕಡಿಮೆ ಮಾಡಲು ಪಾಲಿಸಿದ ಹಲವು ಮಾರ್ಗಗಳ ಬಗ್ಗೆ ಅವರು ಮಾತನಾಡಿದ್ದು ಈಗಲೂ ಅಚ್ಚಳಿಯದ ನೆನಪು.
ಗೋವಿಂದಪ್ಪ ಅವರು ಹುಟ್ಟು ಹೋರಾಟಗಾರರು, ನಾಯಕನ ಗುಣ ಲಕ್ಷಣಗಳನ್ನು ಮೈ ಗೂಡಿಸಿಕೊಂಡೆ ಬೆಳೆದವರು ಎಂದೆನಿಸುತ್ತೆ.
ಬಡಾವಣೆಗೆ ಮೊದಲು ಬಂದಾಗ ಅವರು ಮಿತಭಾಷಿಯಾಗಿ ಕಂಡರೂ ನಂತರ ಹಲವಾರು ಸಮಸ್ಯೆಗಳು ಮುನ್ನೆಲೆಗೆ ಬಂದಾಗ ಅವರ ಒಳಗಿನ ಹೋರಾಟ ಪ್ರಜ್ಞೆ ಜಾಗೃತವಾಗಿ ಒಳಗಿಂದ ಒಬ್ಬ ವೀರ ಯೋಧ, ನಾಯಕ ಧಾವಿಸಿ ಎದ್ದು ಬಂದ. ನನ್ನಷ್ಟಕ್ಕಷ್ಟೇ ಇದ್ದ ನಾನು ಮುಂದೆ ಬಡಾವಣೆಯ ವಿವಿಧ ಪ್ರಗತಿಯ ಕೆಲಸಗಳಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳ ಬಗ್ಗೆ ಸಮಾಲೋಚನೆ ಮಾಡುತ್ತ ಅವರಿಗೆ ಹತ್ತಿರವಾದೆ.
ಒಂದು ಘಟನೆ ನನ್ನ ಅವರನ್ನು ಅತ್ಯಂತ ಹತ್ತಿರಕ್ಕೆ ತಂದು ನಿಲ್ಲಿಸಿದ್ದು ಎಂದರೆ ಅವರ ಊರಿನ ಸ್ನೇಹಿತರಾದ ಗೋವಿಂದಪ್ಪ (ಅವರ ಹೆಸರು ಸಹ ಅದೇ) ಅವರ ಮಗಳೋ ಅಥವಾ ಸೊಸೆಯೋ ಇರಬೇಕು ಅವಳು ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದಳು. ಜೀವನ್ಮರಣದ ಹೋರಾಟದಲ್ಲಿದ್ದ ಆ ಹೆಣ್ಣು ಮಗಳಿಗೆ ತಕ್ಷಣ (ಒಂದು ವಿರಳ ಗುಂಪಿನ) ರಕ್ತ ಬೇಕಾಗಿತ್ತು ಆ ಸಂದರ್ಭದಲ್ಲಿ ಅವರು ನಮ್ಮ ಗೋವಿಂದಪ್ಪ ಅವರ ಸಂಪರ್ಕ ಮಾಡಿ ಕೇಳಿಕೊಂಡಿದ್ದಾರೆ, ತಕ್ಷಣ ಇವರು ನನ್ನ ವಿಚಾರಿಸಿದಾಗ ನಾನು ಕೆಲಸದ ಮಧ್ಯೆ ತಕ್ಷಣ ರಕ್ತದ ವ್ಯವಸ್ಥೆ ಮಾಡಿಸಿದೆ ಅದು ಆ ಹೆಣ್ಣು ಮಗಳ ಜೀವ ಉಳಿಸಲು ಕಾರಣವಾಯಿತು, ಈ ವಿಚಾರವಾಗಿ ಅವರು ಗೋವಿಂದಪ್ಪ ಅವರಿಗೆ ಬಹಳ ಬಹಳ ಕೃತಜ್ಞತೆಗಳನ್ನ ಹೇಳಿದ್ದರು, ಜೀವನ ಪರ್ಯಂತ ಅವರಿಗೆ ಋಣಿ ಎಂಬ ಇತ್ಯಾದಿ ಮಾತುಗಳನ್ನ ಆಡಲು, ಇವರು ನೀವು ಏನೇ ಹೇಳಲು ಬಯಸಿದರೆ ಅದು ಮoಕಾಲ್ ಅವರಿಗೆ ತಿಳಿಸಿ ಎಂದು ನನ್ನ ಮೊಬೈಲ್ ಸಂಖ್ಯೆಯನ್ನ ಅವರಿಗೆ ನೀಡಿದ್ದರು, ಆ ಹೆಣ್ಣು ಮಗಳ ತಂದೆ ಗದ್ಗದಿತರಾಗಿ ನನಗೆ ಹೇಳಿದ ವಂದನೆಗಳನ್ನ ನಾನು ಎಂದು ಮರೆಯುವುದಿಲ್ಲ. ಅಂದಿನಿಂದ ನಾನು ಆ ಹೆಣ್ಣು ಮಗಳ ಅಣ್ಣ ನಾದೆ (ಹೊಟ್ಟೆಯಲ್ಲಿ ಹುಟ್ಟಿದವರಷ್ಟೇ ಅಣ್ಣ ತಮ್ಮ ಅಕ್ಕ ತಂಗಿ ಆಗಬೇಕೆಂದಿಲ್ಲ ಅಲ್ವಾ ?). ಅಲ್ಲಿಂದ ಪ್ರತಿ ಹಬ್ಬ ವಿಶೇಷ ದಿನಗಳಿಗೆ ಆ ಹೆಣ್ಣು ಮಗಳು ನನಗೆ ಶುಭಾಶಯಗಳು ಎಂದು ವಾಟ್ಸಪ್ ಸಂದೇಶ ಕಳಿಸುವುದು ನಾನು ಅವಳಿಗೆ ಪ್ರತಿಯಾಗಿ ಸಂದೇಶ ಕಳಿಸುವುದು ಅವಿಸ್ಮರಣೀಯವೇ ಸರಿ, ಸದ್ದಿಲ್ಲದೇ ಇಂತಹ ಒಳ್ಳೆಯ ಕೆಲಸಗಳನ್ನ ಗೋವಿಂದಪ್ಪ ಅವರು ನಾನು ಕಂಡಂಗೆ ಸುಮಾರು ಮಾಡಿದ್ದಾರೆ ಹಾಗೆ ಮಾಡುತ್ತಲೇ ಇದ್ದರು, ಹಾಗೆ ಇನ್ನೊಂದು ಮೆಚ್ಚಿಕೊಳ್ಳುವ ಮನೋಧರ್ಮ ವೆಂದರೆ ಒಳ್ಳೆಯ ಕೆಲಸವನ್ನು ತಾನು ಮಾಡಿದೆ ಎಂದು ಎಲ್ಲಿಯೂ ಹೇಳಿಕೊಳ್ಳಲು ಹೋಗದಿರುವುದು. ಬಡಾವಣೆಯ ರಸ್ತೆಗಾಗಿ, ನೀರಿಗಾಗಿ, ಭಾರಿ ವಾಹನಗಳ ನಿಷೇಧ, ಚರಂಡಿ ವ್ಯವಸ್ಥೆ ಗಾಗಿ, ಐದನೇ ಅಡ್ಡ ರಸ್ತೆಯ ಕಾನೂನು ಹೋರಾಟದಲ್ಲಿ (ಸ್ವಲ್ಪ ಕಾಲ) ವಿವಿಧ ಸ್ಥರಗಳಲ್ಲಿ ನಡೆದ (ಹೋರಾಟವೆಂದೇ ಹೇಳಬಹುದು) ಚರ್ಚೆ ಗಳು ಸಭೆಗಳು ಮುಖಂಡರ ಜತೆ ಮಾತುಕತೆಯಲ್ಲಿ ಅವರು ನನ್ನ ಎಳೆದದ್ದು, ನಾನು ಶುರುವಿನಿಂದ ಕೊನೆಯವರೆಗೆ ಅವರಿಗೆ ನೀಡಿದ ಸಾಥ್ ನಿಂದ ನಾನು ಅವರ ಅಚ್ಚು ಮೆಚ್ಚಿನ ಶಿಷ್ಯನಾದೆ ಅನ್ನಬಹುದು. ಹೀಗೆ ನನ್ನ ಅವರ ಸ್ನೇಹ (ನನ್ನ ಸಮಾನ ವಯಸ್ಕ ಚಡ್ಡಿ ದೋಸ್ತರಿಗೂ ಮಿಗಿಲಾಗಿ) ಆಪ್ತತೆ ಎತ್ತರಕ್ಕೆ ಬೆಳೆದದ್ದು.
ಡೀ ಎನ್ ಕ್ಲೇವ್ ಹೊರಗೆ ಕೊಡಿಗೇಹಳ್ಳಿ ಮುಖ್ಯ ರಸ್ತೆಗೆ ಕೂಡುವ ರಸ್ತೆಗಾಗಿ ಬಡಾವಣೆ ಯ ಜನ ಸುತ್ತು ಬಳಸಿ ಹೋಗುವ ಬದಲು ನೇರ ಸಂಪರ್ಕ ರಸ್ತೆಯನ್ನು ಪಡದೇ ತೀರಬೇಕೆಂಬ ಸಂಕಲ್ಪ ತದನಂತರ ಅದಕ್ಕೆ ಅವರು ರೂಪಿಸಿದ ಕಾರ್ಯತಂತ್ರ ಮತ್ತೆ ಅದರ ನೇತೃತ್ವ ವಹಿಸಿ ಛಲದಂಕ ಮಲ್ಲನಂತೆ ಹೋರಾಡಿ ಗೆಲುವು ಸಾಧಿಸಿದ್ದು ಬಡಾವಣೆಯ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತವು ಹಾಗೆ ಜನ ಮಾನಸದಲ್ಲಿ ಸದಾ ನೆಲೆಸಿರುವ ಅವರ ಹೋರಾಟದ ರೋಮಾಂಚನ ಕಥನಗಳು. ಆ ಗೆಲುವು ಸುಮ್ಮನೆ ಸಿಗಲಿಲ್ಲ, ಅದಕ್ಕಾಗಿ ಪಕ್ಕದ ಬಡಾವಣೆಯ ಜನರ ಜೊತೆ ಜಗಳ ಕಾಯಬೇಕಾಗಿ ಬಂತು, ನಿವೇಶನವೊಂದನ್ನು ಖರೀದಿಸಬೇಕಿತ್ತು, ಪೊಲೀಸ್ ಮೆಟ್ಟಿಲೇರಬೇಕಾಗಿ ಬಂತು, ಬಡಾವಣೆಗೆ ಅಗಲ ರಸ್ತೆ ಗಾಗಿ ಸ್ಥಳೀಯ ಭೂಮಾಲಿಕರ ಶಾಸಕ ನಗರಸಭಾ ಅಧಿಕಾರಿಗಳ ಜತೆ ಸಭೆಗಳ ಮಾಡಬೇಕಾಗಿತ್ತು, ಅವರನ್ನ ಕಾಡಿ ಬೇಡಿ ಮನೆಯ ಕೆಲಸಗಳ ಬದಿಗೊತ್ತಿ ಸಮಾಜಕ್ಕಾಗಿ ದುಡಿಯಬೇಕಿತ್ತು. ಕೊನೆಗೂ ಸ್ವಾತಂತ್ರ್ಯದಿಂದ ಆರಾಮವಾಗಿ ಓಡಾಡುವ ರಸ್ತೆಗಳನ್ನ ಪಡೆದದ್ದು ಈಗ ಇತಿಹಾಸ, ಅದೆಲ್ಲ ಸಾಧ್ಯವಾದದ್ದು ಅವರಿಂದ ಮಾತ್ರ. ಇದರ ಮೂಲಕ ಬಡಾವಣೆಯ ಜನರಿಗೆ ಒಂದು ಶಾಶ್ವತ ದೇಣಿಗೆ ನೀಡಿದ ವೀರ ಗೋವಿಂದಪ್ಪ ಅಂದರೆ ತಪ್ಪಾಗಲಾರದು.
ಆ ಸಂದರ್ಭದಲ್ಲಿ ಸಮಸ್ಯೆಗಳನ್ನು ಹೊದ್ದು ಮಲಗಿದ ಬಡಾವಣೆ ನೋಡ ನೋಡುತ್ತಾ ಅವರ ನಾಯಕತ್ವದಲ್ಲಿ ಮೈ ಕೊಡವಿ ಎದ್ದು ನಿಂತು ಬಿಟ್ಟಿತು. ನೋಡಲು ಸದಾ ಗಂಭೀರವಾಗಿ ಕಾಣುವ, ಕೆಲಸದ ಬಗ್ಗೆ ಮಾತ್ರ ಮಾತಾಡುವ ವ್ಯಕ್ತಿಯನ್ನ ಕಚಗುಳಿಯಿ ಇಟ್ಟು ನಗೆ ಗಡಲಲ್ಲಿ ತೇಲಿಸಿದ ಮೊದಲಿಗ ನಾನು ಎಂದು ಹೆಮ್ಮೆಯಿಂದ ಹೇಳುವೆ. ಸಮಸ್ಯೆಗಳ ಕಂಡರೆ ಪರಿಹಾರ ಮಾರ್ಗಗಳ ಬಗ್ಗೆ ಯೋಚಿಸುವ ತಪ್ಪಾಗಿ ಮಾತನಾಡುವ ಯಾರನ್ನೇ ಆಗಲಿ ನಿರ್ದಾಕ್ಷಿಣ್ಯವಾಗಿ ಖಂಡಿಸುವ ಮೃದು ಮನಸ್ಸು ಅವರದಾಗಿತ್ತು.
ಮನೆಯ ಪಕ್ಕ ಕಸ ವಿಲೇವಾರಿ, ನೀರಿಗಾಗಿ ದನಿ ಎತ್ತಿದ ನನ್ನ ಕರೆದು ಸಂಘದ ಸಭೆಗಳಿಗೆ ಸೇರಿಸಿಕೊಂಡು ಚರ್ಚೆಗಳಲ್ಲಿ ಸಕ್ರೀಯವಾಗಿ ಭಾಗಿ ಆಗುವಂತೆ ಮಾಡಿದರು. ದಿನದಿಂದ ದಿನಕ್ಕೆ ಅವರ ವರ್ಚಸ್ಸು ಏರುಗತಿಯಲ್ಲಿ ಸಾಗಲು ಭಿನ್ನ ಮತೀಯ ಬಣವೊಂದು ಸೃಷ್ಟಿ ಆಗುತ್ತಲೇ ಇತ್ತು. ಅವರು ಮಾಡುವ ಪ್ರತಿ ಕೆಲಸದಲ್ಲಿ ತಪ್ಪುಗಳ ಹುಡುಕಿ ಮುಂದೆ ನಿಂತು ಮಾತಾಡದೆ ಹಿಂದಿನಿಂದಲೇ ಮಾತನಾಡಿ ಅವರನ್ನು ನಿಂದಿಸುತ್ತಿದ್ದರು. ಅವರ ಮನೆಗೆ ನಾನು ಯಾವಾಗಲೂ ಸ್ನೇಹಿತನಾಗಿ ಹೋಗಿ ಮಗನಾಗಿ ಹಿಂದುರುಗಿ ಬರುತ್ತಿದ್ದೆ. ದೊಡ್ಡಮ್ಮ ನನ್ನನ್ನು ಸದಾ ಮಗನ ಹಾಗೆ ಪ್ರೀತಿಯಿಂದ ಕಂಡು ಮಾತಾಡಿಸುತ್ತಿದ್ದರು. ಪ್ರತಿ ಸಾರಿ ನಾನು ಹೋದಾಗ ಊಟ ತಿಂಡಿ ಇಲ್ಲದೆ ವಾಪಸಾಗುತ್ತಿರಲಿಲ್ಲ, ಯಾವುದೇ ನೀರಿಕ್ಷೆ ಇಲ್ಲದ ಭೇಟಿ ನಮ್ಮದು, ಕಡಿಮೆ ಅಂದರೆ ಒಂದು ಘಂಟೆ ಅವರ ಮನೆಯಲ್ಲಿ ಕಳೆಯುತ್ತಿದ್ದೆ. ನನ್ನ ಅವರ ಒಡನಾಟ ವನ್ನು ಸಹಿಸದ ಕೆಲವರು ನಮ್ಮ ಈ ಬಾಂಧವ್ಯಕ್ಕೆ ಹುಳಿ ಹಿಂಡಲು ಹೋದರು, ಅವರ ಕೈಲಿ ಯಾವುದೇ ಹಾನಿ ಮಾಡಲಾಗದೆ, ಮನದೊಳಗೆ ನಿಂದಿಸುತ್ತಾ ಸುಮ್ಮನಾದರು.
೨೦೧೦ - ೧೧ ರ ಸುಮಾರಿಗೆ ಅವರಿಗೆ ಈ ಭಿನ್ನ ಮನಸ್ಸಿನ ಜನರ ಬಗ್ಗೆ ಬೇಸರವಾಗಿತ್ತು, ನನ್ನ ಕರೆದು ಆ ಸಂದರ್ಭದ ಸಮಸ್ಯೆಗಳನ್ನ ತಿಳಿಸಿ ಸಂಘದ ನೇತೃತ್ವ ವಹಿಸಲು ತಿಳಿಸಿದಾಗ ನನಗೆ ಭಯ ಹಾಗು ಆಶ್ಚರ್ಯ ಗಳು ಒಮ್ಮೆಲೇ ಉಂಟಾದವು, ಅದರ ಜೊತೆಗೆ ನನ್ನ ಬಗ್ಗೆ ಅವರಿಗಿರುವ ನಂಬಿಕೆ ವಿಶ್ವಾಸಗಳ ಬಗ್ಗೆ ಹೆಮ್ಮೆ ಎನ್ನಿಸಿತು. ಅವರ ಮಾರ್ಗದರ್ಶನದಲ್ಲಿ ನನಗೆ ತಿಳಿದಷ್ಟರ ಮಟ್ಟಿಗೆ ಬಡಾವಣೆಯ ಯುವ ಪಡೆಯನ್ನು ಸಜ್ಜು ಮಾಡಲು ಹೊರಟೆ, ಬಡಾವಣೆಯ ನಿವಾಸಿಗಳ ವಿಶ್ವಾಸ ಪಡೆದು ಅಧ್ಯಕ್ಷ ಉಪಾಧ್ಯಕ್ಷ ಕಾರ್ಯದರ್ಶಿಗಳ ನೇಮಕವು ನಡೆಯಿತು, ಸಭೆಯಲ್ಲಿ ಬಡಾವಣೆಯನ್ನು ಒಂದು ಮಾದರಿ ಬಡಾವಣೆಯಾಗಿ ರೂಪಿಸಲು ಹೊಸ ಉತ್ಸಾಹದಿಂದ ನಾವು ಕೆಲಸ ಶುರು ಮಾಡಿದೆವು. ಹಣವಿಲ್ಲದೆ ಕೆಲಸ ಮಾಡುವ ಗುರಿ ಹಾಕಿಕೊಂಡು ಮುನ್ನಡೆದೆವು, ವೃತ್ತಿಯ ಜತೆ ಈ ಸಾಮಾಜಿಕ ಕೆಲಸ ಮಾಡುವಷ್ಟು ಸಮಯ ಹಾಗೂ ಅನುಭವದ ಕೊರತೆ ನಮ್ಮನ್ನು ಕಷ್ಟಕ್ಕೆ ದೂಡಿದ್ದು ಕೆಲವು ಅಹಿತಕರ ಘಟನೆಗಳಿಂದ ವಿಚಲಿತರಾಗಿ ನಮ್ಮ ಗುರಿಯಿಂದ ವಿಮುಖರಾಗಿದ್ದು ಹೆಚ್ಚಿನ ಜನರಿಗೆ ಅಲ್ಪ ಸ್ವಲ್ಪ ಮಾತ್ರ ಗೊತ್ತು, ಆಗಲೂ ಗೋವಿಂದಪ್ಪ ಅವರಿಗೆ ಈ ಎಲ್ಲ ವಿಷಯಗಳ ಬಗ್ಗೆ ಅರಿವಿತ್ತು ಅವರು ಈ ಯುವಕರು ಸಮಾಜ ಸೇವೆಯ ಅನುಭವವನ್ನು ಪಡೆಯಲಿ, ಸಮಸ್ಯೆಗಳನ್ನ ಎದುರಿಸಿ ನಮ್ಮಲ್ಲಿ ನಾವೇ ಅವುಗಳನ್ನು ಪರಿಹರಿಸಿಕೊಳ್ಳಲಿ ಎಂಬ ಉನ್ನತ ವಿಚಾರ ಅವರದಾಗಿತ್ತು ಅಂತ ಅನ್ಸುತ್ತೆ.
ಇದೆ ಸಮಯ ಬಡಾವಣೆಯಲ್ಲಿ ಸಾರ್ವಜನಿಕ ಗಣೇಶನ ಇಡುವ ವಿಚಾರ ನನ್ನ ಮನಸ್ಸಲ್ಲಿ ಮೂಡಿತ್ತು ಅದರ ಪ್ರಸ್ತಾಪ ಮಾಡಿದಾಗ ಸಂಘದ ಸದಸ್ಯರೇ ವಿರೋಧ ವ್ಯಕ್ತ ಪಡಿಸಿದರು, ನನಗೆ ಒಳ್ಳೆಯ ಕಾರ್ಯ ಮಾಡಲು ಯಾರ ಒಪ್ಪಿಗೆಯೂ ಬೇಕಿಲ್ಲ ಎಂಬ ಭಾವನೆ ಧೃಡವಾಗಿ ಮೂಡಲು, ಗೋವಿಂದಪ್ಪ ಹಾಗೆ ಇನ್ನು ಹಲವರಿಗೆ ಮಾತಾಡಿದೆ. ಎಲ್ಲರ ವಿರೋಧದ ನಡುವೆ ನನ್ನ ಬೆನ್ನ ಹಿಂದೆ ನಿಂತು ಧೈರ್ಯ ನೀಡಿದ ವ್ಯಕ್ತಿ ದ್ವೈಯರಲ್ಲಿ ಗೋವಿಂದಪ್ಪ ನವರು ಒಬ್ಬರು. ಆ ದಿನದಿಂದ ನಮ್ಮ ಬಡಾವಣೆಯಲ್ಲಿ ಸಾರ್ವಜನಿಕ ಗಣೇಶೋತ್ಸವ ಸಡಗರದಿಂದ ನಡಿತಾ ಇದೆ.
ಗೋವಿಂದಪ್ಪನವರ ಶಿಸ್ತು ಎಲ್ಲರಿಗೆ ತಿಳಿದ ವಿಷಯ, ಅವರ ಉಡುಗೆ ತೊಡುಗೆ ಮಾತಿನಿಂದ ಹಿಡಿದು ಮನೆಯಲ್ಲಿ ಕುಳಿತುಕೊಳ್ಳುವದರವರೆಗೂ ಪ್ರತಿ ಕೆಲಸದಲ್ಲಿ ಬಹಳ ಅಚ್ಚು ಕಟ್ಟು ಇರಬೇಕು, ಮನೆಗೆ ಹೋದರೆ ಹೊರಗೆ ನಾ ಬಿಡುವ ಚಪ್ಪಲಿಗಳು ಅದರ ಜಾಗದಲ್ಲಿರಬೇಕು, ಕಾಲು ಅಲ್ಲಾಡಿಸದೇ ಕುರ್ಚಿಯಲ್ಲಿ ಕುಳಿತುಕೊಳ್ಳಬೇಕು ನೆಲಕ್ಕೆ ಹಾಕಿದ ಚಾಪೆಯ ಮೇಲೆ ಅಪ್ಪಿ ತಪ್ಪಿಯೂ ಏನೂ ಬೀಳಕೂಡದು ಇತ್ಯಾದಿ ಕಟ್ಟು ನಿಟ್ಟುಗಳಿಗೆ ಮೊದಲು ಸಮ್ಮತಿಸುತ್ತಿದ್ದೆ ನಂತರ ಅವರನ್ನು ತಮಾಷೆಗಳೊಳಗೆ ಬಂಧಿಸಿ ಅದನ್ನವರು ಮರೆಯುವಂತೆ ಮಾಡಿಬಿಡುತ್ತಿದ್ದೆ. ಪ್ರತಿ ಕೆಲಸದಲ್ಲಿ ಬಹಳ ತಯಾರಿ ಮಾಡಿಕೊಂಡು ಪ್ರತಿ ಸಂದರ್ಭದಲ್ಲೂ ಒಬ್ಬ ಸಮರ್ಥ ಆಡಳಿತಗಾರನಂತೆ ನಮ್ಮ ಬಡಾವಣೆಯನ್ನ ಪ್ರತಿನಿಧಿಸಿ ಮುನ್ನಡೆಸಿದ ಧೀರ ಅಂದರೆ ಅತಿಶಯೋಕ್ತಿ ಯಾಗಲಾರದು. ಯಾವುದೇ ಚಿಕ್ಕ ವಿಷಯ ವಿರಲಿ ಕೆಲಸವಿರಲಿ ತಯಾರಿ ಇಲ್ಲದೆ ಮುಂದೆ ನಡೆಯುವ ಜಾಯಮಾನ ಅವರದಾಗಿರಲಿಲ್ಲ.
ಮಹಾರಾಷ್ಟ್ರದ ಮುಂಬೈನಲ್ಲಿ ಒಳ್ಳೆಯ ಹುದ್ದೆಯಲ್ಲಿ ನಿವೃತ್ತಿ ಹೊಂದಿ ಬಂದಿದ್ದ ಇವರು ತಮ್ಮನ್ನು ಕನ್ನಡಿಗನಿಗಿಂತ ಹೆಚ್ಚು ಮರಾಟಿಗನೇ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಮನೆಯಲ್ಲಿ ಕುಟುಂಬದ ಸದಸ್ಯರೊಡನೆ ಸದಾ ಮರಾಠಿಯಲ್ಲಿಯೇ ಮಾತುಕತೆ, ಅವರ ಹೆಚ್ಚಿನ ಸ್ನೇಹ ನಂಟು ಇದ್ದದ್ದು ಮಹಾರಾಷ್ಟ್ರದಲ್ಲೇ ಎಂದು ಆಗಾಗ್ಗೆ ಹೇಳುತ್ತಾ ಇದ್ದರು.
ಆದರೂ ಅವರ ಕನ್ನಡ ಪ್ರೇಮ ಮೆಚ್ಚುವಂತದ್ದು, ಮೊದ ಮೊದಲು ಸಂಘದ ಸಭೆಗಳಲ್ಲಿ ಆಂಗ್ಲದಲ್ಲೇ ಮಾತು ಮಾಹಿತಿ ಚರ್ಚೆ ನಡೆಯುತ್ತಿತ್ತು, ನಾನು ಸಂಘದ ಸಭೆಗಳಲ್ಲಿ ಭಾಗವಹಿಸಲು ಶುರು ಮಾಡಿದ ಮೇಲೆ ಅದರ ಚಿತ್ರಣ ಬದಲಾಗಿ ಸಂಪೂರ್ಣ ಕನ್ನಡಮಯವಾಗಿದ್ದು ನನಗೂ ಅವರಿಗೂ ಹೆಮ್ಮೆಯ ವಿಷಯ. ಒಮ್ಮೆ ನೇರವಾಗಿ ಸಭೆಯಲ್ಲಿ ಎದ್ದು ನಿಂತು "ಕನ್ನಡದಲ್ಲಿಯೇ ಮಾತಾಡಿ ಸ್ವಾಮೀ, ಎಲ್ಲರಿಗೂ ಅರ್ಥ ಆಗುತ್ತೆ" ಅಂತ ದನಿ ಎತ್ತಿದ್ದೆ, ಅದಾದ ನಂತರ ಹಲವಾರು ಇಲಾಖೆಗಳ ಜತೆ ಪತ್ರ ವ್ಯವಹಾರ, ಸಂಘದ ಸರ್ವ ಸದಸ್ಯರ ಸಾಮಾನ್ಯ ಸಭೆಗಾಗಿ ಕಳಿಸಲಾಗುತ್ತಿದ್ದ ಪತ್ರಗಳಲ್ಲಿ ಸಂಪೂರ್ಣ ಕನ್ನಡ ರಾರಾಜಿಸಿತು. ಅಂದಿನಿಂದ ನನ್ನ ಮಾತಿಗೆ ಪೂರ್ಣ ಬೆಂಬಲ ನೀಡುತ್ತಾ ಬಂದರು. ನನ್ನ ಕನ್ನಡ ಪ್ರೀತಿಯ ಬಗ್ಗೆ ಅವರಿಗೂ ಹೆಮ್ಮೆ ಇತ್ತು, ನನ್ನ ಕನ್ನಡ ಕೈ ಬರಹವನ್ನು ಬಹುವಾಗಿ ಮೆಚ್ಚಿಕೊಂಡು ಹಲವಾರು ಜನರ ಮುಂದೆ ಮುಕ್ತವಾಗಿ ಹೊಗಳುತ್ತಿದ್ದರು. ಸಂಘದ ಕೆಲವು ಪತ್ರಗಳನ್ನ ಕನ್ನಡದಲ್ಲಿ ಅವರ ಮನೆಗೆ ಹೋಗಿ ಚರ್ಚೆ ಮಾಡಿ ಬರೆದುಕೊಡುತ್ತಿದ್ದೆ. ಅವರು ಒಂದೊಮ್ಮೆ ನನಗೆ ಹೇಳಿದ್ದು ಈಗಲೂ ನೆನಪಿಗೆ ಬರ್ತಾ ಇದೆ "ನಿನ್ನೊಬ್ಬನ ಸಲುವಾಗಿ ನೋಡಪಾ ನಾವು ಈ ಪತ್ರ ವ್ಯವಹಾರಗಳನ್ನೆಲ್ಲ ಕನ್ನಡ ದಲ್ಲಿಮಾಡ್ತಾ ಇದೀವಿ" ಅಂತ. ನಾನು ಬರೆದ ಪತ್ರಗಳನ್ನ ಓದಿ ನಂತರ ಹಲವಾರು ಕಡೆ ತಿದ್ದಿ ಪುನಃ ಬರೆಯಲು ಹೇಳಿದಾಗ ಸ್ವಲ್ಪ ಬೇಸರ ವಾಗುತಿತ್ತು ಆದರೂ ಸರಿ ಎಂಬ ಕಾರಣದಿಂದ ಬರೆದುಕೊಡುತ್ತಿದ್ದೆ. ಒಮ್ಮೆ ಒಂದು ಬಿತ್ತಿ ಪತ್ರದಲ್ಲಿ "ಡೀ ಎಂಕ್ಲೇವ್" ಎಂದು ಬರೆದದ್ದನ್ನು ಕಂಡು ಅದು ತಪ್ಪು ಅದನ್ನು "ಡೀ ಏನ್ ಕ್ಲೇವ್" ಎಂದು ಬರೆಯಬೇಕು ಎಂದು ತಿದ್ದಿದ್ದು ನಾನು ನನ್ನ ಜನ್ಮದಲ್ಲೇ ಮರೆಯುವುದಿಲ್ಲ, ಅದರ ಜೊತೆ ಹಲವಾರು ಕನ್ನಡದ ಪದಗಳ ಬಗ್ಗೆ ಕಾಗುಣಿತದ ಬಗ್ಗೆ ನುಡಿಗಟ್ಟು, ಗಾದೆ ಮಾತುಗಳು, ಕನ್ನಡ ವ್ಯಾಕರಣದ ಬಗ್ಗೆ ನಮ್ಮಿಬ್ಬರ ನಡುವೆ ಚರ್ಚೆ ನಡೆಯುತ್ತಲೇ ಇತ್ತು. ಆ ವ್ಯಯಸ್ಸಿನಲ್ಲೂ ಬಾಲ್ಯ ಕಾಲದಲ್ಲಿ ಓದಿದ್ದ ವಿಷಯಗಳನ್ನು ಮರೆಯದೆ ಇರುವುದು ಅವರ ಶ್ರಧ್ಧೆ ಹಾಗೂ ಜ್ಞಾಪಕ ಶಕ್ತಿಗೆ ಹಿಡಿದ ಕನ್ನಡಿ ಎನ್ನಬಹುದು.
ಸುಮಾರು ೨೦೧೫-೧೬ ರಲ್ಲಿ ನನ್ನ ವ್ಯಯುಕ್ತಿಕ ಜೀವನದಲ್ಲಿ ಹಲವು ಸಮಸ್ಯೆಗಳು ಎದುರಾದವು, ಆ ಕಾಲದಲ್ಲಿ ನನ್ನ ತಿಳುವಳಿಕೆಗೆ ತಕ್ಕಂತೆ ನಾನು ನಡೆದುಕೊಂಡಿದ್ದೆ ( ಅದು ಸರಿಯೋ ತಪ್ಪೋ), ಆ ವಿಷಯವನ್ನೇ ಮುಂದೆ ಇಟ್ಟುಕೊಂಡು ನನ್ನ ಏಳಿಗೆ ಸಹಿಸದವನೊಬ್ಬ ನನ್ನ ಕುರಿತು ಹಲವು ವದಂತಿಗಳನ್ನ ಹರಿಬಿಡಲು ಮಾಡಲು ಶುರು ಮಾಡಿದ, ಈ ವಿಚಾರವನ್ನು ಸಹ ಅವರು ನನಗೆ ತಿಳಿಸಿ ಮಾನಸಿಕವಾಗಿ ಧೃತಿ ಗೆಡದೆ ಧೈರ್ಯವಾಗಿ ಮುಂದೆ ಸಾಗಲು ತಿಳಿಸಿದರು, ಯಾವತ್ತೂ ಇನ್ನೊಬ್ಬರ ವ್ಯಯುಕ್ತಿಕ ಜೀವನದಲ್ಲಿ ತಲೆ ಹಾಕದೆ, ಇನ್ನೊಬ್ಬರ ಬಗ್ಗೆ ಅಪಪ್ರಚಾರ ಮಾಡದೇ, ಸಾಮಾಜಿಕ ವಿಷಯಗಳ ಬಗ್ಗೆ ಮಾತ್ರ ಮಾತನಾಡಿರೆಂದು ಎಲ್ಲರಿಗೂ ವಿನಂತಿಸುತ್ತಿದ್ದರು. ಸಂಘದಲ್ಲಿ ಅವರ ಸಭೆಯ ನಂತರ ಹೊರಗೆ ಬಂದೊಡನೆಯೇ ಅವರ ಕುರಿತೇ ಸದಸ್ಯರು ಅವರನ್ನು ನಿಂದಿಸುತ್ತಾ ಬರುತ್ತಿದ್ದುದು ಅವರಿಗೂ ಗೊತ್ತಿದ್ದೂ ತಲೆಯನ್ನೇ ಕೆಡಿಸಿಕೊಳ್ಳುತ್ತಿರಲಿಲ್ಲ. ಅವರ ಎತ್ತರದ ನಿಲುವು ಗತ್ತು ಗಾಂಭೀರ್ಯ ನೇರ ನಡೆ ನುಡಿ ಅಂಜದ ಅಳುಕದ ವ್ಯಕ್ತಿತ್ವ ಅನುಕರಣೀಯ, ಮಾತುಗಳು ನಿಷ್ಠುರವಾಗಿದ್ದರೂ ಹೃದಯಾಂತರಾಳದಲ್ಲಿ ಕರುಣಾಮಯಿ ಆಗಿದ್ದರು. ಕುಟುಂಬದ ವಿಚಾರವಾಗಿ ಅವರು ಎರಡೇ ವಾಕ್ಯದಲ್ಲಿ ಕಿವಿ ಮಾತುಗಳನ್ನ ಹೇಳಿದ್ದರು ಅದನ್ನೆಂದು ನಾನು ಮರೆಯಲಾರೆ.
ನನ್ನ ಅವರ ನಡುವೆ ಮುಂದೆ ಗಣೇಶನ ಪ್ರತಿಷ್ಠಾಪನೆ ಜಾಗದ ಕುರಿತು ವಾದವಾಯಿತು ಹಾಗೆ ಸಣ್ಣ ಪುಟ್ಟ ವಿಷಯಗಳ ಬಗ್ಗೆ ವಿಚಾರಗಳ ಸಂಘರ್ಷಗಳ ನಡುವೆಯೂ ನಾನು ಅವರ ಮನೆಗೆ ಹೋಗುವುದನ್ನ ನಿಲ್ಲಿಸಲಿಲ್ಲ. ಅವರ ಬಗ್ಗೆ ನಾನು ಆಗಾಗ್ಗೆ ನೇರವಾಗಿ ತಮಾಷೆ ಮಾಡುವುದು ನನ್ನ ಬಗ್ಗೆ ಅವರು ಪ್ರೀತಿಯಿಂದ ಗೇಲಿ ಮಾಡುವುದು ನಡೆಯುತ್ತಲೇ ಇತ್ತು. ಅವರು ಎಲ್ಲದರಲ್ಲಿ ತುಂಬಾ ಶ್ರದ್ಧೆ ವಹಿಸಿದರು ಆದರೆ ಆರೋಗ್ಯಕ್ಕಾಗಲಿ ವ್ಯಾಯಾಮಕ್ಕಾಗಲಿ ಅವರು ಜಾಸ್ತಿ ಆದ್ಯತೆ ಕೊಡಲಿಲ್ಲ ಅಂತ ನನಗೆ ಅನ್ನಿಸುತ್ತೆ.
ನಂತರ ಕೆಲ ದಿನ ಸಂಘದಲ್ಲಿ ಮುಖಂಡರಿಲ್ಲದ ಕಾರಣ ಕೆಲ ಕೆಲಸಗಳು ನೆನೆಗುದಿಗೆ ಬಿದ್ದಿದ್ದವು, ಅವರಿಗೆ ಸಮಾಜ ಎಂದರೆ ತಮ್ಮ ಮನೆಯ ಕೆಲಸಕ್ಕಿಂತ ಜಾಸ್ತಿ. ಅವರು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿದ್ದ ಕಾಲದಲ್ಲಿ ಅವರಲ್ಲಿನ ಗೆಲುವನ್ನ ನಾನು ನೋಡಿದ್ದೆ, ಈಗ ಖಾಲಿ ಕುಳಿತು ಕೊಳ್ಳುವುದು ಅವರಿಗೆ ಅತಿ ದೊಡ್ಡ ರೋಗವಾಗಿ ಪರಿಣಮಿಸಿತ್ತು. ಆಗಾಗ್ಗೆ ನನ್ನ ಮನೆಗೆ ಕರೆದು ಬಡಾವಣೆಯ ಸಮಸ್ಯೆಗಳ ಬಗ್ಗೆ ಕಾರ್ಯೋನ್ಮುಖ ರಾಗುವ ಬಗ್ಗೆ ತಿಳಿಸಿ ಹೇಳುತ್ತಿದ್ದರು. ಅವರು ಅಧ್ಯಕ್ಷರಾಗಿಯೇ ಕೆಲಸ ಮುಂದುವರೆಸಿಕೊಂಡು ಹೋಗುತ್ತಿದ್ದಲ್ಲಿ ಇನ್ನು ಹೆಚ್ಚಿನ ಕಾಲ ಬದುಕುತ್ತಿದ್ದರೇನೋ ಅನ್ನಿಸುತ್ತೆ. ನನ್ನಲ್ಲಿ ಈಗಲೂ ಅವರು ನಾನು ಕುಳಿತು ಚರ್ಚಿಸಿ ವಿವಿಧ ಇಲಾಖೆಗಳಿಗೆ ಬರೆದ ಪತ್ರಗಳ ಪ್ರತಿಗಳಿವೆ ಅದನ್ನು ಆಗಾಗ್ಗೆ ಓದಿ ನೆನಪು ಮಾಡಿಕೊಳ್ಳುತ್ತೇನೆ. ಅದರ ಜೊತೆ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಮಾತನಾಡುವಾಗ ಅವರು ಕಲಿಸಿಕೊಟ್ಟ ಹಲವಾರು ಸೂತ್ರಗಳು ನನ್ನೊಡನೆ ಬೆರೆತು ಹೋಗಿವೆ. ಅವರ ಇನ್ನೊಂದು ಚಟುವಟಿಕೆ ಎಂದರೆ ಓದುವ ಬರೆಯುವ ಹವ್ಯಾಸಗಳು, ಅವು ನನ್ನ ಮೇಲೆ ಪರಿಣಾಮ ಬೀರಿವೆ ಅಂತ ಹೇಳಿದರೆ ತಪ್ಪಾಗಲ್ಲ. ಮನೆಯಲ್ಲಿ ಒಪ್ಪ ಓರಣವಾಗಿ ಜೋಡಿಸಿಟ್ಟ ವೃತ್ತ ಪತ್ರಿಕೆ ಹಾಗು ಮಾಸ ಪತ್ರಿಕೆಗಳು ಸದಾ ನನ್ನನ್ನು ಸೆಳೆಯುತ್ತಿದ್ದವು. ಆ ವ್ಯಯಸ್ಸಿನಲ್ಲೂ ಅವರು ಸದಾ ಕಾರ್ಯನಿರತ ರಾಗುವ, ಬಡಾವಣೆಯ ಸಮಸ್ಯೆಗಳು ಕಂಡು ಬಂದಾಗ ಉತ್ಸಾಹಿ ತರುಣ ರಂತಾಗುವ ಅವರ ಎದೆಯಲ್ಲಿ ನಿಸ್ವಾರ್ಥ ಸೇವೆಯ ಗುಣ ಮನೆ ಮಾಡಿತ್ತು.
ಬಡಾವಣೆಯ ಜನರ ಒಗ್ಗಟ್ಟಿಗಾಗಿ ಸಮಾನ ಮನಸ್ಕರ ಗುಂಪನ್ನು ಮಾಡುವ ವಿಚಾರವನ್ನು ಅವರಿಗೆ ತಿಳಿಸಿದೆ ಹಾಗೆ ಅವರಿಂದ ಸಲಹೆಯನ್ನ ತೆಗೆದುಕೊಂಡು ತಕ್ಷಣ ಶುರು ಮಾಡಿ ಬಿಟ್ಟೆವು. ತಿಂಗಳಿಗೆ ಒಂದು ಸಾವಿರ ರೂ ಮೂಲಕ ಎಲ್ಲರನ್ನು ಸೇರಿಸುವ ಉದ್ದೇಶ ಈಡೇರಿತು, ನಮ್ಮ ಆ ಗುಂಪಿನ ಜತೆ ತಲಕಾಡು ಹಾಗು ಸೋಮನಾಥಪುರಕ್ಕೆ ೧೫ - ೧೬ ಕುಟುಂಬದವರೆಲ್ಲರೂ ಹೋಗಿ ಬಂದೆವು. ನಂತರದ ದಿನಗಳಲ್ಲಿ ಸಾಮಾಜಿಕ ಜಾಲತಾಣ ಮಾಧ್ಯಮಗಳ ಭರಾಟೆ ಶುರು ಆದ ಮೇಲೆ "ಡೀ ಬಾಂಧವರು" ವಾಟ್ಸಾಪ್ ಗುಂಪನ್ನು ಮಾಡಿ ಶ್ರೇಯೋಭಿವೃದ್ಧಿ ಯಲ್ಲಿ ನಿಸ್ವಾರ್ಥವಾಗಿ ಯಾವುದೇ ಪ್ರಚಾರಕ್ಕೆ ಎಂದೂ ಬಯಸದ ಎಲೆಮರೆಯ ಕಾಯಿಯಾಗಿ ದುಡಿಯುವದರ ಬಗ್ಗೆ ನನಗೆ ಸ್ಪೂರ್ತಿ ನೀಡಿದರು.
ಸ್ವಲ್ಪ ದಿನಗಳ ನಂತರ ಗಣೇಶ ಹಬ್ಬ ಆಚರಣೆ ಸಮಯದಲ್ಲಿ ನಾನು ಅವರ ಮಾತು ಕೇಳುತ್ತಿಲ್ಲ ಎಂದು ಬಹಳ ಕುಪಿತರಾಗಿದ್ದರು, ಒಂದೆರೆಡು ವರ್ಷ ನಾವು ಎತ್ತಿದ ಚಂದಾ ಹಣವನ್ನು ಉಳಿಸಿ ಸಂಘಕ್ಕೆ ಕೊಟ್ಟಿದ್ದೆವು, ಈ ಉತ್ಸವ ಮಕ್ಕಳು ಮನರಂಜನೆಗಾಗಿ ಮಾಡುವಂತಾಗಲಿ, ಸಂಘ ನಡುವೆ ಬಾರದಿರಲಿ ಎಂಬ ವಿಚಾರ ನನ್ನ ಹಾಗು ಕೆಲವರದಾಗಿತ್ತು ಆದರೆ ಅವರು ಸಂಘದ ಹೆಸರಿನಲ್ಲೇ ನಡೆಯಬೇಕೆಂದು ಹಟ ಮಾಡಿದರು, ಕೊನೆಗೆ ಒಪ್ಪದಿರಲು ಮನಸ್ಸಾಗಲಿಲ್ಲ. ಆದರೆ ಈ ಗಣೇಶ ಉತ್ಸವವನ್ನ ಯುವಕರ ಕೈಲಿ ಮಾಡಿಸುವ ಪಣ ತೊಟ್ಟು, ಅವರನ್ನೇ ಮುಂದೆ ಬಿಟ್ಟು ಕೊಟ್ಟು ಹಿರಿಯರು ಮಾರ್ಗದರ್ಶನ ಮಾಡಬೇಕೆಂದು ನನ್ನ ಹಂಬಲವಾಗಿತ್ತು, ಹಾಗೆ ಯಾವುದೇ ಪ್ರಚಾರದ ಆಸೆ ಲಾಭಕ್ಕೆ ಹೋಗದೆ, ಅದೇ ರೀತಿ ನಡೆದು ಮುಕ್ತಾಯವಾದಾಗ ಎಲ್ಲಿಯೂ ನಾನು ಮಾಡಿದೆ ಅಂತ ಇದುವರೆಗೂ ಹೇಳಿಕೊಳ್ಳಲಿಲ್ಲ ಹಾಗೆ ಯಾವುದೇ ಕಾಗದ ಪತ್ರಗಳಲ್ಲಿ ನನ್ನ ಹೆಸರನ್ನು ಬರದಂತೆ ನೋಡಿಕೊಂಡೆ.
ಉತ್ಸವ ಮುಗಿದ ಮೇಲೆ ಒಂದು ದಿನ ಹಣಕಾಸಿನ ವಿಚಾರವಾಗಿ ರಸೀದಿ ಕೊಡುವ ಹುಡುಗರು ಮಾಡಿದ ಚಿಕ್ಕ ತಪ್ಪಿನಿಂದ ಹಿರಿಯ ಸದಸ್ಯರೊಬ್ಬರು ಸಂಘದ ಹಲವರೆದುರು ಸಭೆಗೆ ಕರೆಸಿ ನನಗೆ ಅವಮಾನ ಮಾಡುವಾಗ ಸುಮ್ಮನೆ ಕುಳಿತದ್ದು ನನಗೆ ತುಂಬಾ ಬೇಸರ ತಂದಿತು, ನಿಸ್ವಾರ್ಥತೆಯಿಂದ ಮಾಡುತ್ತಿದ್ದ ನನಗೆ ಇನ್ನು ಮುಂದೆ ಈ ಯಾವುದರ ಗೊಡವೆಯೇ ಬೇಡ ಎಂದು ಸಂಪೂರ್ಣ ದೂರ ಸರಿದುಬಿಟ್ಟೆ. ಈ ಸಾರಿ ನನ್ನ ಅವರ ನಡುವಿನ ಭಿನ್ನಾಭಿಪ್ರಾಯ ಬೇಸರಗಳು ಸಿಟ್ಟಿಗೆ ತಿರುಗಿದ್ದ ಕಾರಣ ಅವರ ಮಾತಿಗೆ ಬಿಲ್ಕುಲ್ ಒಪ್ಪಲಿಲ್ಲ, ನನ್ನನ್ನ ತಮ್ಮ ಕಡೆ ತಿರುಗಿಸಿಕೊಳ್ಳಲು ಹಲವು ಮಾರ್ಗಗಳನ್ನ ಅನುಸರಿಸಿದರು ಆದರೆ ನಾನು ಜಗ್ಗಲಿಲ್ಲ, ನಾನು ಆ ಮಾಹಿತಿಯನ್ನ ಕೊಡಬಹುದಿತ್ತು ಆದರೆ ನನಗೆ ಮಾಡಿದ ಅವಮಾನದಿಂದ ನಾನು ಅವರ ಯಾವುದೇ ಮಾತಿಗೆ ಬೆಲೆ ಕೊಡದಂತೆ ನಡೆದುಕೊಳ್ಳುತ್ತ ದೂರ ದೂರ ಹೊರಟು ಹೋದೆ. ಕೊನೆಗೆ ಲೆಕ್ಕ ಪತ್ರ ವಿಚಾರವಾಗಿ ಸಂಘದ ಪತ್ರದ ಮುಖೇನ ನನಗೆ ಸೂಚನೆ ಕಳಿಸಿದರೂ ನಾನು ಬಗ್ಗಲಿಲ್ಲ ಯಾಕೆಂದರೆ ಅದು ಬಡಾವಣೆಯ ಹುಡುಗರ ನೇತೃತ್ವದಲ್ಲಿ ನಡೆದದ್ದು ಎಂದು ಸುಮ್ಮನಾದೆ, ಆ ವಿಷಯವನ್ನೇ ಮುಂದಿಟ್ಟುಕೊಂಡು ನನ್ನ ಬಗ್ಗೆ ಸಂಘದ ಒಬ್ಬ ಅಪಪ್ರಚಾರ ಮಾಡಿದ, ಅದರ ಬಗ್ಗೆ ಯಾವತ್ತೂ ತಲೆ ಕೆಡಿಸಿಕೊಳ್ಳಲೇ ಇಲ್ಲ.
ಮೊದ ಮೊದಲು ಆ ವಿಚಾರದಿಂದ ನನ್ನ ಜೊತೆ ಮಾತಾಡುವದನ್ನೇ ಬಿಟ್ಟರು, ನಾನು ಒಂದು ವರ್ಷ ಕೆಲಸದ ನಿಮಿತ್ತ ಚೆನ್ನೈ ಗೆ ಹೋದೆ ಅಲ್ಲಿಂದ ನಮ್ಮ ನಡುವೆ ಯಾವುದೇ ಮಾತುಕತೆ ಇರಲಿಲ್ಲ ನಂತರ ಹಿಂದುರಿಗಿ ಬಂದಾಗ ಅವರೇ ಕರೆ ಮಾಡಿ ಮನೆಗೆ ಬಂದು ಹೋಗು ಎಂದರು. ಮನೆಗೆ ಹೋದಾಗ ಅವರು ತುಂಬಾ ನೋವನ್ನು ಉಂಡಂತೆ ಕಂಡರು, ಅವರ ಆರೋಗ್ಯದಲ್ಲಿ ಸ್ಥಿರತೆ ಇರಲಿಲ್ಲ ಮಾನಸಿಕವಾಗಿ ಬಳಲಿದಂತೆ ಕಂಡರು. ಆ ಭೇಟಿಯಾದ ದಿನ ಅವರು ಒಂದು ಮಾತು ಹೇಳಿದರು "ಇತ್ತೀಚಿಗೆ ನನಗೆ ಮರೆವು ಜಾಸ್ತಿ ಆಗಿದೆ ಅಪ್ಪಾ ". ಅದರ ಹಿಂದಿನ ಅರ್ಥ ನಾನು ಮಾಡಿಕೊಂಡೆ, ಪರೋಕ್ಷವಾಗಿ ನಮ್ಮಿಬ್ಬರ ನಡುವೆ ನಡೆದ ಬಿಸಿ ಮಾತುಗಳನ್ನ ಮನಸ್ಸಿಗೆ ಹಚ್ಚಿಕೋಬೇಡ ಅಂತ ಅವರು ಹೇಳಿದ್ದರು.
ಒಂದು ಸಾರಿ ಅವರ ಕಾಲುಗಳ ಬಗ್ಗೆ ನನ್ನ ಮುಂದೆ ಮಾತಾಡಿ ನಡೆಯಲಿಕ್ಕೆ ಆಗುತ್ತಿಲ್ಲ, ಹಾಸಿಗೆಯಿಂದ ಎದ್ದೇಳಲು ಆಗದೆ ಮಲಗಿಯೇ ಪೂರ್ತಿ ಜೀವನ ಕಳೆಯಬೇಕಾಗುತ್ತೆ ಎಂಬ ಭಯ ಆವರಿಸಿದ್ದು, ಆಯುರ್ವೇದಿಕ್ ಅಥವಾ ಒಂದು ಸಣ್ಣ ಚಿಕಿತ್ಸೆಯಿಂದ ಹೇಗೆ ಅದರಿಂದ ಪಾರಾಗಿದ್ದು ಎಂದು ನನ್ನೊಡನೆ ಹೇಳುತ್ತಿದ್ದರು, ಕ್ಷೀಣಿಸುತ್ತಿದ್ದ ಅವರ ಆರೋಗ್ಯದ ಬಗ್ಗೆ ನನಗೆ ಆಗಾಗ್ಗೆ ಕಳವಳವಾಗುತ್ತಿತ್ತು ಒಬ್ಬ ಯೋಗ ಗುರುವನ್ನು ಅವರ ಮನೆಗೆ ಕರೆದುಕೊಂಡು ಹೋಗಿದ್ದೆ. ಸರಳವಾಗಿ ಮಾಡುವ ಕೆಲವು ಆಸನಗಳನ್ನು ಪ್ರಾಣಾಯಾಮ ಬಗ್ಗೆ ಅವರು ತಿಳಿಸಿ ಆಸನಗಳನ್ನ ಮಾಡುವ ಕ್ರಮವನ್ನು ತೋರಿಸಿಕೊಟ್ಟರು. ಅದನ್ನು ಅವರು ಮಾಡುತ್ತಿದ್ದೇನೆ ಅಂತ ಹೇಳಿದ್ದರು, ಅದಕ್ಕಾಗಿ ಅವರಿಗೆ ಕೃತಘ್ನತೆಯ ಸುರಿಮಳೆ ಯನ್ನ ಹರಿಸಿ ನನ್ನ ಬಗ್ಗೆ ಕೂಡ ಮೆಚ್ಚುಗೆ ವ್ಯಕ್ತ ಪಡಿಸಿದ್ದು ನೆನೆದರೆ ಕಣ್ಣಲ್ಲಿ ಹನಿಗಳು ಒಂದು ಗೂಡುವವು.
ಕೊನೆಗೆ ನನ್ನ ಭಾರತೀಯ ಸಿಟಿಯ ಗೃಹ ಪ್ರವೇಶಕ್ಕೆ ಕರೆದಿದ್ದೆ, ಅವರಿಗೆ ಆರೋಗ್ಯ ಸರಿ ಇಲ್ಲದ ಕಾರಣ ಬರಲಾಗಲಿಲ್ಲ, ನಂತರ ಎರಡು ಮೂರೂ ಬಾರಿ ಮನೆಗೆ ಹೋಗಿ ಬಂದೆ. ಕರೆಯನ್ನು ಮಾಡಿದಾಗ ಅವರು ಮಾತನಾಡಿದ್ದು ಕಡಿಮೆ. ಒಂದು ಸಾರಿ ನಾನೇ ಕೇಳಿದೆ "ನನ್ನ ಮೇಲೆ ಇನ್ನು ಸಿಟ್ಟು ಹೋಗಿಲ್ಲವೇ?" ಅಂತ, ಅದಕ್ಕವರು "ಅಯ್ಯೋ ! ಎಂತದಪ್ಪ ಸಿಟ್ಟು ನಿನ್ನ ಮೇಲೆ" ಅಂದು ಸುಮ್ಮನೆ ನಕ್ಕಿದ್ದರು.
ಅದಾದ ಮೇಲೆ ಚೇರ್ಮನ್ಸ್ ಕ್ಲಬ್ ನಲ್ಲಿ ಮದುವೆ ಯೊಂದರಲ್ಲಿ ಭೇಟಿ ಆಗಿದ್ದೆವು, ಉಭಯ ಕುಶಲೋಪರಿ ನಂತರ ಎಲ್ಲರ ಎದಿರು ನನ್ನ ಕಾಲೆಳೆದು "ಏನಪ್ಪಾ ದೊಡ್ಡಪ್ಪ ನ್ನ ಮರೆತೆಯಾ ?" ಎಂದರು, ಅದಕ್ಕೆ ನಾನು "ದೊಡ್ಡಪ್ಪ ಈಗ ದಡ್ದಪ್ಪ ಆಗಿದ್ದಾರೆ" ಅಂತ ತಮಾಷೆ ಮಾಡಿದ್ದೆ. ಅದೇ ನನ್ನ ಅವರ ನಡುವಿನ ಕೊನೆಯ ಮಾತು.
ಈ ಎಲ್ಲ ಘಟನೆಗಳನ್ನ ನೆನಪಿಸಿಕೊಂಡು ಮಾತು ಮುಗಿಸುವ ಮುನ್ನ ನಿಜವಾಗಿ "ದೊಡ್ಡಪ್ಪ ತಮ್ಮ ಅರೋಗ್ಯದ ವಿಷಯವಾಗಿ ಬಹಳ ದೊಡ್ಡ ತಪ್ಪು ಮಾಡಿ ದಡ್ದಪ್ಪ ಆಗಿಬಿಟ್ಟರು ಅಂತ ಅನ್ನಿಸ್ತಾ ಇದೆ". ಅವರು ಮನಸ್ಸು ಮಾಡಿದ್ದರೆ ೧೦೦ ವರುಷ ಬದುಕುತ್ತಿದ್ದರು ಎಂದು ಮನಸ್ಸು ದುಃಖಿಸುತ್ತೆ.
ಹತ್ತಿರದಿಂದ ಅವರನ್ನು ಬಲ್ಲ ನನಗೆ ಅವರ ನೋವುಗಳನ್ನುಂಡ ಕಣ್ಣುಗಳು ಕಾಡುತ್ತವೆ. ಎಲ್ಲೋ ಮನದ ಮೂಲೆಯಲ್ಲಿ ಅವರಿಗೆ ತಿಳಿದೋ ತಿಳಿಯದೆಯೋ ನೋವುಂಟು ಮಾಡಿದೆನೋ ಎಂದು ಅಂತರಾತ್ಮದಲ್ಲಿ ಅವಲೋಕಿಸುತ್ತ ಜಿಜ್ಞಾಸೆಗೆ ತೊಡಗುತ್ತೇನೆ. ವ್ಯಕ್ತಿ ಇಲ್ಲ, ಯಾರ ಬಳಿ ಯಾದರು ಹೇಳಿಕೊಂಡರೆ ಉಪಯೋಗವೇನು ? ಕೊನೆಯ ಪಕ್ಷ ಇಲ್ಲಿಯಾದರು ಅದನ್ನು ದಾಖಲಿಸಬೇಕೆಂಬ ಹಂಬಲದಿಂದ ಇಡೀ ದಿನ ಯೋಚಿಸಿ ಬರೆದಿದ್ದೇನೆ.
ಕೊಳಲನೂದು ಗೋವಿಂದಾ ಮುಪ್ಪಿಗಾಗಲಾನಂದ !!
ಪುತಿನ ಅವರ ಕವನದ ಸಾಲು ನೆನಪಿಗೆ ಬಂತು, ಯಾರೋ ದೂರದಲ್ಲಿ ಕೊಳಲನೂದುತ್ತಿದ್ದಾರೆ, ಗೋವಿಂದಪ್ಪನವರಿಗೆ ಮಾತ್ರ ಕೊಳಲಿನಾ ನಾದ ಕೇಳಿಸುತ್ತಿದೆ, ಆ ನಾದದಲ್ಲಿ ಮೈ ಮರೆತು ಹೋಗಿರುವುದನ್ನ, ಶೂನ್ಯದಲ್ಲಿ ಬೆರೆತಿರುವುದನ್ನ, ಎಲ್ಲ ಮರೆತಿರುವುದನ್ನ ನಾನು ಕಾಣುತ್ತಿದ್ದೇನೆ.....
-ಕವೆಂಪ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ಸಹೃದಯಿಗಳೇ, ನೆನಪಿಡಿ, ನಿಮ್ಮ ಅನಿಸಿಕೆ ನನ್ನ ಬರಹಗಳಲ್ಲಿನ ಕೊರತೆಗಳಿಗೊಂದು ಲಸಿಕೆ