ಕೋಣೆಯ ಕದವು ಮುಚ್ಚಿದೆ
--------------------------------------
ಮನಸ್ಸು ಎಂಬ ಮೃದು ಅಮೂರ್ತ ಲೋಕದಲ್ಲಿ ಕೆಲ ಸಂಗತಿಗಳು ಆಕರ್ಷಿಸಿ ವಿಕರ್ಷಿಸಿ ವಿಶ್ಲೇಷಿಸಿಕೊಂಡು ಕೆಲವರಿಗೆ ಮಾತ್ರ ತೆರೆದು ಕೊಂಡು, ಇನ್ನೂ ಕೆಲವರಿಗೆ ಶಾಶ್ವತವಾಗಿ ಮುಚ್ಚಿಕೊಳ್ಳುವ ಒಂದು ಕಲ್ಪನೆಯನ್ನು ಮುಚ್ಚಿದ (ಕದ) ಕೋಣೆ ಯ ಬಾಗಿಲಿನ ಕವನದ ಮೂಲಕ ತೆರೆದಿಡಲಾಗಿದೆ. ಸಣ್ಣ ವಿಚಾರಗಳು ಹೇಗೆ ಬಂಧಿಸಿ ಬಾಧಿಸಿ ನಂತರ ಚಿಂತಿಸಿ, ಮಂಥಿಸಿ ನಿರ್ಣಯಿಸಿಕೊಂಡು ಬಿಡುಗಡೆ ಹೊಂದುವ ಪ್ರಕ್ರಿಯೆಗೆ ಸಂಬಂಧಿಸಿದ ಒಂದು ಸೂಕ್ಷ್ಮ ಎಳೆಯ ಕುರಿತು ಅವಲೋಕಿಸಿದಾಗ ನನ್ನೊಳಗೆ ಹೊಳೆದದ್ದು. ಸಂದರ್ಭಕ್ಕೆ ಪ್ರತಿಯಾಗಿ ಸೃಷ್ಟಿ ಯಾಗುವ ಸನ್ನಿವೇಷದಲ್ಲಿ, ವೇಷಗಳಿಂದಾಚೆಗಿನ ಯೋಚನಾ ಪ್ರವಾಹಗಳಲ್ಲಿ ಇಲ್ಲದವು ಸಲ್ಲದವು ಕೊಚ್ಚಿ ಹೋಗುವದರಷ್ಟಕ್ಕೆ ಅದರ ಬೆಲೆ ನಿರ್ಧರಿಸಲಾಗಿದೆ ಎಂಬುದನ್ನು ಕೊನೆಯ ದರವನು ವಿಧಿಸಿದೆ, ಕೊನೆಯ ಬಾಗಿಲು ಮುಚ್ಚಿದೆ ಸಾಲುಗಳು ಸಾರಿವೆ.
ಕೋಣೆಯ ಕದವು ಮುಚ್ಚಿದೆ
-------------------------------------
ಕೋಣೆಯ ಕದವು ಮುಚ್ಚಿದೆ
ಕೋಣೆಯು ಹದವ ಮುಟ್ಟಿದೆ
ಬಾಯಿ ಮುಚ್ಚದೇ ಕೋರಿದೆ
ತೆರೆಯಲು ಸೂಚನೆ ಸಿಕ್ಕದೆ
ಮೌನ ಸೋಗಿನಲ್ಲಿ ನಿಂತಿದೆ
ಕಿರು ದೀಪದ ಬೆಳಕಲಿ ನಕ್ಕಿದೆ
ಮಾತುಗಳಿಗೆ ರೆಕ್ಕೆ ಪುಕ್ಕವ ಕಟ್ಟದೆ
ಕಟ್ಟಿದೆ ಕತ್ತಲಲಿ ನೆತ್ತಿಯು ಕೆಟ್ಟಿದೆ
ಬಯಲ ಬಿಸಿಯನು ಭರಿಸಿದೆ
ಆಳದಲ್ಲಿ ಹೂಳು ಹೂತು ಹೋಗಿದೆ
ಕರೆಯು ಹೊರಗೆ ಕೇಳಿಸದೆ
ಕೊನೆಯ ದರವನು ವಿಧಿಸಿದೆ
ಕೊನೆಯ ಕದವು ಮುಚ್ಚಿದೆ
ಕೋಣೆಯ ಕದವು ಮುಚ್ಚಿದೆ