ಮನಸ್ಸಿನಲ್ಲಿ ಜೋಪಾನವಾಗಿ ಕಾದಿಟ್ಟುಕೂಂಡ ಭಾವನೆಗಳನ್ನು ಹೇಳಲಾಗದೆ, ಸುಸಂದರ್ಭವನ್ನು ಕಳೆದುಕೂಂಡು ಪರಿತಪಿಸಿ ಇನ್ನೂಂದು ರಸಮಯ ಭೇಟಿಗಾಗಿ ಕೂರಗುವ, ಬಹಳ ಸನಿಹ ಬಹಳ ದೂರ ಎನಿಸಿದಂತೆ ಕಂಡು ಬಂದರೂ ಅದಮ್ಯ ಸ್ನೇಹ ಪ್ರೀತಿಯಿಂದ ಇನ್ನೂಂದು ಅವಕಾಶಕ್ಕಾಗಿ ದೈನ್ಯತೆಯಿಂದ ಬೇಡುವ, ಒಂದು ಅಪೂರ್ವ ಸನ್ನಿವೇಶದಲ್ಲಿ ಸುಲಭವಾಗಿ ಬಹಿರಂಗಗೂಳ್ಳದ, ರಸಿಕತೆಯಿಂದ ತುಂಬ ಆತ್ಮವಿಶ್ವಾಸದಿಂದ ಕೂಡಿದ ಯೋಚನೆಗಳು ಕವನದ ಮೂಲಕ ಅನಾವರಣಗೂಂಡಿವೆ.
ಇಲ್ಲಿ ಪ್ರಣಯವೇ ಭೇಟಿಯ ಉದ್ದೇಶವೆಂದು ಮೇಲ್ನೋಟಕ್ಕೆ ಕಂಡುಬಂದರೂ, ದಟ್ಟೈಸಿದ ನಿಷ್ಕಪಟ, ಪ್ರಾಮಾಣಿಕ ಭಾವನೆಗಳು ಸ್ನೇಹ ಪ್ರೀತಿ ಪ್ರೇಮಗಳ ಹೊಸ ಅರ್ಥದ ಆವಿಷ್ಕಾರಕ್ಕೆ ನಾಂದಿ ಹಾಡುತ್ತೆ.
ಕೊಡು ಇನ್ನೊಂದು ಅವಕಾಶವನ್ನು !
=====================
ಸಾಕೆನಿಸುವುದಿಲ್ಲ ನಿನ್ನ ಸಹವಾಸಗಳು ಎಂದಿಗೂ
ಅದೇ ಮಧುರತೆಯ ಸೂಜಿಗಲ್ಲಿನಲ್ಲಿ ಸೆಳೆಯುವೆ ಇಂದಿಗೂ
ನಾ ಕರೆದಾಗ ನೀ ಬಂದರೆ ಚಿರ ಯೌವ್ವನ ನಮಗೆಂದೆಂದಿಗೂ
ಬರೆಯುವೆ ಒಂದೊಂದು ನಿಮಿಷಗಳ ಮರೆಯದೆ
ನಿನ್ನೊಳು ಹುದುಗಿ ಹರಿಯುವ ರಸಚಲನೆಯ ಅಳುಕದೆ
ಬಂದು ಹುಡುಕುವಾಗ ಕಣ್ಣಾ ಮುಚ್ಚಾಲೆ
ನೀ ಸಿಕ್ಕಿದ ಕೂಡಲೇ ಮಾತೆ ಮುಚ್ಚಿದ ಬಾಗಿಲೆ
ಗಮನಿಸುವ ಕಣ್ಗಳಿಗೆ ಬೇಟೆಯಾಗದಿರಲು
ನೀ ನೀಡಿದ ಸಂಹ್ನೆ, ನನ್ನ ಕಾದಿಟ್ಟ ಬಯಕೆಗಳ ತೀವ್ರತೆಯ
ಸಡಿಲಿಸಿದರೂ ಮೈ ತಾಕುವ ಸನಿಹ ನೀಡಿ ಸಾವರಿಸಿದೆ
ಕೈ ಹಿಚುಕಿದೆ ಕೈ ಕೈ ಹಿಚುಕಿಕೊಂಡೆ
ಬೆಳಕು ಕಸಿದುಕೊಂಡ ಚುಂಬನದೊಂದಿಗೆ
ಕತ್ತಲು ಕೊಡುವ ಧೈರ್ಯದ ಕನಸಿನೊಂದಿಗೆ
ಕಳೆದುಕೊಂಡೆ ಒಂದು ಸುಮಧುರ ಸಂಜೆ ನಿನ್ನೊಂದಿಗೆ
ಕಲಿತಿರುವೆ ಪಾಠವನ್ನು ಹುಡುಕಿಡುವೆ
ಖಾಲಿ ನೋಟಗಳ ತೋಟಗಳನ್ನು
ಹೂವಾಗಿಹುದು ಕಾಯಾಗಿಹುದು ಹಣ್ಣಾಗಲು
ಬೇಡುವುದು ಬೆಚ್ಚ ಬೆಚ್ಚಗಿನ ಆಸರೆಗಳನ್ನು
ಕಾದಿಟ್ಟ ಒಲವು ಪೋಲಾಗುವುದಿಲ್ಲ
ನಿನ್ನ ಬರುವಿಕೆಗಾಗಿ ಕಾಯುತ್ತಲೇ ಕೂರುವುದು
ಕ್ರೀಯೆ ಪೂರ್ತಿಯಾಗಲು ನಿನ್ನೊಂದು ಒಪ್ಪಿಗೆಗಾಗಿ
ನಿನ್ನ ಸ್ಪರ್ಷಿಸದೆ ಹೇಗೆ ಪ್ರಕಟಿಸಲಿ
ಈ ನನ್ನೊಲುಮೆಯ ತುಡಿತಗಳನ್ನು?
ಮತ್ತೊಮ್ಮೆ ಯಾವಾಗ ಸೃಷ್ಟಿಸುವೆ ಈ ಸಂಜೆಯನ್ನು ?
ಕೊಡು ಇನ್ನೊಂದು ಅವಕಾಶವನ್ನು !
ಸಹೃದಯಿಗಳ ಸಹಾಯಕ್ಕೆ ವಿಶೇಷ ಶಬ್ಧ-ಅರ್ಥಗಳು:
----------------------------------------------------
ಸೂಜಿಗಲ್ಲು = ಅಯಸ್ಕಾಂತ; ಚಿರ = ಅಮರ, ಸಾವಿಲ್ಲದ; ಪೋಲು = ವ್ಯರ್ಥ; ಸಂಹ್ನೆ = ಎಚ್ಚರಿಕೆ; ಸಾವರಿಸು = ಶಾಂತಗೊಳಿಸು, ಸಮಾಧಾನಿಸು; ತುಡಿತ = ಆತುರ
ನಿಮ್ಮ ಗಮನಕ್ಕೆ : ’ಬಾಗಿಲು’ ಪ್ರಾಸದ ಪ್ರಯೋಗಕ್ಕಾಗಿ ’ಬಾಗಿಲೆ’ ಎಂದಾಗಿದೆ